ಮುಂಬಯಿ: ಒಂದಲ್ಲ ಒಂದು ವಿವಾದದಿಂದ ಸದಾ ಚರ್ಚೆಯಲ್ಲೇ ಇರುವ ನಟಿ ಸ್ವರಾ ಭಾಸ್ಕರ್ ರಾಜಕಾರಣಿಯೊಬ್ಬರನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಸಿಎಎ (ಪೌರತ್ವ ಕಾಯ್ದೆ) ಕಾಯ್ದೆ ಸೇರಿದಂತೆ, ಸರ್ಕಾರದ ಅನೇಕ ವಿಚಾರಗಳನ್ನು ವಿರೋಧಿಸಿ ಟ್ರೋಲ್ ಗೆ ಒಳಗಾಗಿ, ವಿವಾದದಿಂದ ಚರ್ಚೆಯಲ್ಲಿರುವ ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಯುವ ಘಟಕದ ಅಧ್ಯಕ್ಷರಾಗಿರುವ ಫಹಾದ್ ಜಿರಾರ್ ಅಹ್ಮದ್ ಎನ್ನುವವರನ್ನು ಮದುವೆಯಾಗಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲ ಬಾರಿ ಸಿಎಎ ಕಾಯ್ದೆಯನ್ನು ವಿರೋಧಿಸುವಾಗ ಪರಸ್ಪರ ಇಬ್ಬರು ಭೇಟಿಯಾದ ಕ್ಷಣ, ಪರಸ್ಪರರ ಪೋಟೋ ಹಾಗೂ ಪ್ರತಿಭಟನೆ ಮಾಡಿ ಕಾಯ್ದೆಯನ್ನು ವಿರೋಧಿಸಿದನ್ನು ತೋರಿಸಲಾಗಿದೆ. ಇದಲ್ಲದೇ ಜ. 6 ರಂದು ಕೋರ್ಟಿನಲ್ಲಿ ಮದುವೆಯಾದ ಕ್ಷಣವನ್ನು ತೋರಿಸಿದ್ದಾರೆ.
ಇತ್ತೀಚೆಗಷ್ಟೇ ಸ್ವರಾ ತಮ್ಮ ಪ್ರೀತಿಯ ಬಗ್ಗೆ ಇನ್ಸ್ಟಾದಲ್ಲಿ ಅರ್ಧ ಮುಖ ಕಾಣುವ ಪೋಟೋವೊಂದನ್ನು ಹಂಚಿಕೊಂಡಿದ್ದರು. ಆಗಲೇ ಫ್ಯಾನ್ಸ್ ಗಳು ಸ್ವರಾ ಪ್ರೀತಿಯಲ್ಲಿದ್ದಾರೆ ಎಂದು ಊಹಿಸಿ ಹತ್ತಾರು ಕಮೆಂಟ್ ಮಾಡಿದ್ದರು.
ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಏನಾದರೂ ಇದ್ದರೂ, ಅದನ್ನು ನಾವು ಇನ್ನೆಲ್ಲೋ ದೂರದಲ್ಲಿ ಹುಡುಕುತ್ತೇವೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ ಮೊದಲು ಸ್ನೇಹವನ್ನು ಕಂಡುಕೊಂಡು, ನಮ್ಮನ್ನು ಅರ್ಥೈಸಿಕೊಂಡೆವು. ನನ್ನ ಹೃದಯಕ್ಕೆ ಸ್ವಾಗತ ಫಹಾದ್ ಎಂದು ಸ್ವರಾ ಬರೆದುಕೊಂಡಿದ್ದಾರೆ.
‘ತನು ವೆಡ್ಸ್ ಮನು’, ‘ಪ್ರೇಮ್ ರಥನ್ ಧನ್ ಪಾಯೋ’, ‘ಅನಾರ್ಕಲಿ ಆಫ್ ಆರಾ’, ‘ವೀರೇ ದಿ ವೆಡ್ಡಿಂಗ್ʼ ಮುಂತಾದ ಸಿನಿಮಾಗಳಲ್ಲಿ ಸ್ವರಾ ನಟಿಸಿದ್ದಾರೆ.
ಇತ್ತೀಚೆಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಗ್ಗೆ ನಡಾವ್ ಲಪಿಡ್ ನೀಡಿದ ಹೇಳಿಕೆಗೆ ಸ್ವರಾ ಭಾಸ್ಕರ್ ಬೆಂಬಲವನ್ನು ನೀಡಿ ಟ್ರೋಲ್ ಗೆ ಒಳಗಾಗಿದ್ದರು.