Advertisement

ಆಡಳಿತ ವೈಫ‌ಲ್ಯ ಮುಚ್ಚಲು ಸ್ವಾಮೀಜಿ ಫೋನ್‌ ಟ್ಯಾಪ್‌ ಪ್ರಸ್ತಾಪ

09:11 PM Oct 01, 2019 | Team Udayavani |

ಹಾಸನ: ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ ನೀಡಲು ಸಾಧ್ಯವಾಗದೇ, ಸರ್ಕಾರದ ಆಡಳಿತ ವೈಫ‌ಲ್ಯ ಮುಚ್ಚಿಕೊಳ್ಳಲು ಆದಿಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂಬ ವಿಷಯ ಪ್ರಸ್ತಾಪಿಸಿ ರಾಜ್ಯದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದರು.

Advertisement

ಆರೋಪದಲ್ಲಿ ಹುರುಳಿಲ್ಲ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದೂರವಾಣಿ ಕದ್ದಾಲಿಕೆಯನ್ನು ಎಚ್‌.ಡಿ.ಕುಮಾರಸ್ವಾಮಿ ಅವರು ಏಕೆ ಮಾಡುತ್ತಾರೆ? ಅದರ ಅನಿವಾರ್ಯತೆಯೇನಿದೆ? ಎಚ್‌.ಡಿ.ಕುಮಾರಸ್ವಾಮಿ ಅವರು ಸ್ವಾಮೀಜಿಯವರ ಫೋನ್‌ ಕದ್ದಾಲಿಕೆ ಮಾಡುವುದಿದ್ದರೆ ಸ್ವಾಮೀಜಿಯವರ ಜೊತೆ ಅಮೇರಿಕಾಕ್ಕೆ ಏಕೆ ಹೋಗುತ್ತಿದ್ದರು? ಇಂತಹ ಆಧಾರ ರಹಿತ ಆರೋಪ ಮಾಡುವ ಮೂಲಕ ಜನರ ಮನಸ್ಸನ್ನು ಬೇರೆಡೆ ತಿರುಗಿಸಿ ಸರ್ಕಾರದ ಆಡಳಿತ ವೈಫ‌ಲ್ಯವನ್ನು ಮುಚ್ಚಿಕೊಳ್ಳಲು ಯತ್ನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರನನ್ನು ಬಿಟ್ಟಿದ್ದಾರೆ ಎಂದರು.

ರಾಜಕೀಯ ನಾಟಕ: ಮುಖ್ಯಮಂತ್ರಿ ಪುತ್ರ ಆರೋಪ ಮಾಡಿದ ಬೆನ್ನಲ್ಲೇ ಸಚಿವ ಅಶೋಕ್‌ ಅವರು ಸ್ವಾಮೀಜಿಯರ ಕ್ಷಮೆ ಕೇಳುತ್ತಾರೆ. ಇದೆಲ್ಲಾ ಎಂಥ ನಾಟಕ ಎಂಬುದು ಗೊತ್ತಾಗುವುದಿಲ್ಲವೇ? ಸ್ವಾಮೀಜಿಯವರ ಬೆಂಬಲಕ್ಕೆ, ಹಿತರಕ್ಷಣೆಗೆ ಸಮುದಾಯದ ಭಕ್ತರಿದ್ದಾರೆ. ಸಚಿವ ಅಶೋಕ್‌ ಕ್ಷಮೆ ಕೇಳುವುದಾಗಲಿ, ವಿಜಯೇಂದ್ರ ಸ್ವಾಮೀಜಿಯವರ ಪರವಾಗಿ ಮಾತನಾಡುವ ಅಗತ್ಯ ಸ್ವಾಮೀಜಿಯರಿಗೆ ಎಂದು ತಿರುಗೇಟು ನೀಡಿದರು.

ಚುನಾವಣೆ ವೇಳೆ ಕೇಂದ್ರದ ಕಣ್ಗಾವಲು: ಯಾವ್ಯಾವ ಸರ್ಕಾರ ಯಾವ ಸಂದರ್ಭಗಳಲ್ಲಿ ಯಾರ್ಯಾರ ದೂರವಾಣಿ ಕದ್ದಾಲಿಕೆ ಮಾಡಿದೆ, ಕಣ್ಗಾವಲು ಇಟ್ಟಿತ್ತು ಎಂಬುದು ನಮಗೆ ಗೊತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಹಾಸನ, ಮಂಡ್ಯ, ತುಮಕೂರು ಲೋಕಸಭಾ ಕ್ಷೇತ್ರಗಳ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಟ್ಟಿರಲಿಲ್ಲವೇ ? ಜೆಡಿಎಸ್‌ ಮುಖಂಡರ ದೂರವಾಣಿ ಕದ್ದಾಲಿಸಿರಲಿಲ್ಲವೇ ಎಂದ ರೇವಣ್ಣ ಅವರು, ಒಂದು ಪ್ರಾದೇಶಿಕ ಪಕ್ಷವನ್ನು ಮುಗಿಸುವ ಸಂಚನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಎಚ್‌.ಡಿ.ದೇವೇಗೌಡು, ಎಚ್‌.ಡಿ.ಕುಮಾರಸ್ವಾಮಿ ಅವರು ಇಂತ ಕುತಂತ್ರಗಳನ್ನೆಲ್ಲಾ ಮೆಟ್ಟಿನಿಂತು ಪಕ್ಷವನ್ನು ಕಟ್ಟಿದ್ದಾರೆ ಎಂದರು.

ಬಿಎಸ್‌ವೈ ಅನಿವಾರ್ಯವಲ್ಲ: ಯಡಿಯೂರಪ್ಪ ಇಲ್ಲದೇ ಬಿಜೆಪಿ ಇಲ್ಲ ಎಂದು ವಿಜಯೇಂದ್ರ ಹೇಳುತ್ತಾರೆ. ಹಾಗಾದರೆ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ 2013 ರಲ್ಲಿ ವಿಧಾನಸಭೆ ಎದುರಿಸಿದಾಗ ಎಷ್ಟು ಸೀಟು ಗೆದ್ದಿದ್ದರು ? ಕೇವಲ 2 ಸೀಟು ಗೆದ್ದು ಮುಖಭಂಗ ಅನುಭವಿಸಿದ್ದಲ್ಲದೆ ಬಿಜೆಪಿಯೂ ಕೇವಲ 40 ಸೀಟು ಗೆದ್ದಿತ್ತು. ಅದೇ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ 2013 ಮತ್ತು 2018 ರಲ್ಲಿ ಜೆಡಿಎಸ್‌ ಎಷ್ಟು ಸೀಟು ಗೆದ್ದಿತ್ತು ಎಂಬುದನ್ನು ವಿಜಯೇಂದ್ರ ಅರ್ಥ ಮಾಡಿಕೊಳ್ಳಲಿ ಎಂದರು.

Advertisement

ಕಳೆದ ಏಳೂವರೆ ವರ್ಷ ಅಧಿಕಾರ ಇಲ್ಲದೆ ವನವಾಸ ಅನುಭವಿಸಿದ್ದ ಯಡಿಯೂರಪ್ಪ ಮನೆಯವರು ಈಗ ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲಿ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ವಿಷಯ ಬಿಟ್ಟು ನೆರೆ ಸಂತ್ರಸ್ತರತ್ತಲೂ ನೋಡಲಿ ಎಂದು ರೇವಣ್ಣ ವ್ಯಂಗ್ಯವಾಡಿದರು. ಹಾಸನ ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕೇಂದ್ರದ ವಿಶ್ವಾಸಗಳಿಸಲು ಬಿಎಸ್‌ವೈ ವಿಫ‌ಲ
ಹಾಸನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ವಿಶ್ವಾಸ ಗಳಿಸಲು ವಿಫ‌ಲರಾಗಿದ್ದಾರೆ. ಹಾಗಾಗಿಯೇ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರಕ್ಕೆ ನೆರವು ಬಿಡುಗಡೆ ಮಾಡುತ್ತಿಲ್ಲ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ 35 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವೇ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವೂ ಬಂದು ಪರಿಶೀಲನೆ ನಡೆಸಿದೆ. ಆದರೂ ರಾಜ್ಯಕ್ಕೆ ನೆರೆ ಪರಿಹಾರವನ್ನು ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ಪರಿಹಾರ ತರಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಮರ್ಥ್ಯವಿಲ್ಲ ಎನ್ನುವುದಾದರೆ ವಿರೋಧ ಪಕ್ಷಗಳ ಮುಖಂಡರ ನಿಯೋಗವನ್ನಾದರೂ ಕರೆದುಕೊಂಡು ಹೋಗಿ ಎಂದರೆ ಬಂಡವಾಳ ಬಯಲಾಗುತ್ತದೆ ಮುಖ್ಯಮಂತ್ರಿಯವರು ಹಿಂಜರಿಯುತ್ತಿದ್ದಾರೆ. ನನ್ನದು ತಂತಿ ಮೇಲಿನ ನಡಿಗೆ ಎಂದು ಅಸಹಾಯಕತೆಯನ್ನು ಮುಖ್ಯಮಂತ್ರಿಯವರು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸರ್ಕಸ್‌ ಮಾಡಿಕೊಂಡು ಅಧಿಕಾರದಲ್ಲಿರಬೇಕೇ?ನಮ್ಮಂಥವರಾಗಿದ್ದರೆ ರಾಜೀನಾಮೆ ನೀಡಿ ಹೊರ ಬರುತ್ತಿದ್ದೆವು ಎಂದು ರೇವಣ್ಣ ಅವರು ಹೇಳಿದರು.

ಅನುದಾನ ಕಡಿತ: ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಅನುದಾನವನ್ನೂ ಕಡಿತ ಮಾಡಲಾಗಿದೆ. ಆರ್ಥಿಕ ಇಲಾಖೆಯ ಅನುಮೋದನೆಯಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿರುವ ಸಕಲೇಶಪುರ ತಾಲೂಕಿನ ಕಾಮಗಾರಿಗಳ 30 ಕೋಟಿ ರೂ., ಬೇಲೂರು ತಾಲೂಕಿನ 20 ಕೋಟಿ ರೂ. ಸೇರಿ ಜಿಲ್ಲೆಗೆ ಮಂಜೂರಾಗಿದ್ದ 79 ಕೋಟಿ ರೂ.ಗಳನ್ನು ಸರ್ಕಾರ ವಾಪಸ್‌ ಪಡೆದುಕೊಂಡಿದೆ. ಉದ್ಯೋಗ ಖಾತರಿ ಯೋಜನೆಯ ಬಾಕಿ 63 ಕೋಟಿ ರೂ. ಒಂದು ವರ್ಷದಿಂದಲೂ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next