ಬೆಂಗಳೂರು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹಲವು ಮಠಾಧೀಶರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಖಣಾಪುರ ಗುರುಪೀಠದ ಸೋಮಲಿಂಗೇಶ್ವರ ಸ್ವಾಮೀಜಿ, ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಿ. ಸರಕಾರ ರಚನೆಗೆ ಹಲವರು ಕಾರಣರಾಗಿದ್ದಾರೆ. ಈಶ್ವರಪ್ಪ ರನ್ನು ಎಂದೂ ಕಡೆಗಣಿಸಬಾರದು. ಕೇಂದ್ರದ ನಾಯಕರು ಇದನ್ನು ಗಮನಿಸಲಿ ಎಂದರು.
ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನ ಕೊಡಲಿ. ಉಪಮುಖ್ಯಮಂತ್ರಿ ಸ್ಥಾನ ಕೊಡಲಿ. ಈಶ್ವರಪ್ಪ ಬೇಡಿ ಈ ಸ್ಥಾನ ಪಡೆಯಬಾರದು. ಈಶ್ವರಪ್ಪ ಪಕ್ಷಕ್ಕಾಗಿ ದುಡಿದಿರುವ ಫಲವಾಗಿ ಸೂಕ್ತ ಸ್ಥಾನ ಕೊಡಲಿ ಎಂದು ಆಗ್ರಹಿಸಿದರು.
ಅಥಣಿಯ ಕವಲುಗುಡ್ಡ ಗುರುಪೀಠದ ಅಮರೇಶ್ವರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಉತ್ತರ ಕರ್ನಾಟಕದ ಸ್ವಾಮೀಜಿಗಳು. ಇಲ್ಲಿಗೆ ಬಂದಿರುವುದು ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನ ಕೊಡಿ ಅಂತ ಕೇಳಲು. ಈಶ್ವರಪ್ಪ ಅವರು ಯಡಿಯೂರಪ್ಪ ಜತೆಗೆ ಪಕ್ಷ ಕಟ್ಟಿದವರು. ಅಂಥ ನಾಯಕನಿಗೆ ನಮ್ಮ ಎದುರು ಅನ್ಯಾಯ ಆಗಬಾರದು. ಈಶ್ವರಪ್ಪ ಹಿಂದುತ್ವಕ್ಕಾಗಿ, ಪಕ್ಷಕ್ಕಾಗಿ ನಿಷ್ಠೆ ಹೊಂದಿರುವರು. ಅವರಿಗೆ ಸೂಕ್ತ ಸ್ಥಾನಮಾನ ಕೊಡಲಿ ಎಂದು ವರಿಷ್ಠರ ಗಮನ ಸೆಳೆಯುತ್ತೇವೆ ಎಂದರು.
ಸರೂರಿನ ರೇವಣ ಸಿದ್ದೇಶ್ವರ ಗುರುಪೀಠದ ಶಾಂತಮಯ ಶಿವಾಚಾರ್ಯ ಮಾತನಾಡಿ, ಮುಖ್ಯಮಂತ್ರಿ ಗೊಂದಲ ಬಗೆಹರಿದಿದೆ. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು ಆದರೆ ಸಿಎಂ ಸ್ಥಾನ ಬಸವರಾಜ ಬೊಮ್ಮಾಯಿಯವರಿಗೆ ಸಿಕ್ಕಿದೆ. ಸಂಪುಟದಲ್ಲಿ ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನ ಕೊಡಬೇಕು. ವಲಸೆ ಬಂದಿರುವವ ಎಲ್ಲರನ್ನೂ ಪರಿಗಣಿಬೇಕು, ಕಡೆಗಣಿಸಬಾರದು. ಒಂದು ವೇಳೆ ಉಪಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಮುಂದೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದರು.