ತಿಪಟೂರು: ಭಾರತ ವಿವಿಧ ಧರ್ಮ, ಭಾಷೆ, ಸಂಸ್ಕೃತಿ, ಸಮುದಾಯಗಳ ಸಮಗ್ರ ವ್ಯಕ್ತಿತ್ವ ಹೊಂದಿದ್ದು, ಎಲ್ಲರೂ ದೇಶದಲ್ಲಿ ಒಗ್ಗಟ್ಟಾಗಿ ಬೆಳೆಯ ಬೇಕೆಂಬುದು ಭಾರತಾಂಬೆಯ ಆಶಯ. ಅದರಂತೆ ಎಲ್ಲರೂ ಒಂದಾಗಿ ಅಜ್ಞಾನ, ಅಂಧಕಾರ ತೊಡೆದು ಹಾಕಿ ದೇಶಕ್ಕಾಗಿ ಕೊಡುಗೆ ನೀಡಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀಗುರು ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಹಾಗೂ ಯುವಪೀಳಿಗೆಗೆ ತಿಳಿಸಿದರು.
ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠದ ಸ್ಥಳೀಯ ಎಲ್ಲಾ ಶಾಲಾ- ಕಾಲೇಜುಗಳಿಂದ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ಸಂವಿಧಾನ ರಚನೆಯಾಗಿ 72ವರ್ಷಗಳಾಗಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಇತಿಹಾಸ, ಪರಂಪರೆಯನ್ನು ಸ್ಮರಿಸುತ್ತಾ ಶಾಂತಿ, ಸಹಿಷ್ಣುತೆ, ಸಮಾನತೆ, ಸೌಹಾರ್ಧತೆ, ಬ್ರಾತೃತ್ವ ಮನೋಭಾವ ಅಳವಡಿಸಿಕೊಳ್ಳುವ ಮೂಲಕ ದೇಶದ ಏಳ್ಗೆಗೆ ಶ್ರಮಿಸಬೇಕಿದೆ ಎಂದರು.
ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಂಡು ದೇಶಕಟ್ಟುವ ಕಾರ್ಯದಲ್ಲಿ ಕೊಡುಗೆ ನೀಡಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ಎಲ್ಲಾ ತ್ಯಾಗಿಗಳು ಹಾಗೂ ಮಹನೀಯರನ್ನು ಸ್ಮರಿಸಬೇಕೆಂದರು.
ಇದನ್ನೂ ಓದಿ:ಮೂಗಿಗೆ ತುಪ್ಪ ಹಚ್ಚುವ ಬಿಎಸ್‌ವೈ: ಸಿದ್ದರಾಮಯ್ಯ
ವಿದ್ಯಾಪೀಠದ ಸಹ ಕಾರ್ಯದರ್ಶಿ ಶಂಕರಪ್ಪ, ಆಡಳಿತಾಧಿಕಾರಿ ವಿ.ಎಸ್.ಲೋಕೇಶ್, ಪ್ರಾಂಶುಪಾಲ ವೈ.ಎಸ್.ಪುಟ್ಟಸ್ವಾಮಿ, ಸಂಸ್ಕೃತ ಮುಖ್ಯಸ್ಥರಾದ ಗಂಗಣ್ಣ, ಮುಖ್ಯ ಶಿಕ್ಷಕರಾದ ಎಚ್ .ಡಿ. ದೇವರಾಜು, ಬಿ.ಎಸ್.ನಾಗರಾಜು, ಇಂದ್ರಮ್ಮ, ಐಟಿಐ ಕಾಲೇಜಿನ ಪ್ರಾಂಶುಪಾಲ ಪಾಷಾ, ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಇದ್ದರು.
ಈ ವೇಳೆ ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಮೂಲಕ ಕಾರ್ಯಕ್ರಮವನ್ನು ಸರಳ ಹಾಗೂ ಸುಂದರವಾಗಿ ಆಯೋಜಿಸಲಾಗಿತ್ತು.