Advertisement

ಜೀವನದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಿ

08:47 PM Jan 12, 2020 | Lakshmi GovindaRaj |

ತುಮಕೂರು: ನಮ್ಮ ಸನಾತನ ಧರ್ಮ, ಸಂಸ್ಕೃತಿ, ಪರಂಪರೆಯನ್ನು ವಿಶ್ವದೆಲ್ಲಡೆ ಸಾರಿದ ಮಹಾನ್‌ ಚೇತನ ಸ್ವಾಮಿ ವಿವೇಕಾನಂದರು. ವಿದ್ಯಾರ್ಥಿಗಳು ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರ ಆದರ್ಶ ತಿಳಿದುಕೊಳ್ಳಿ: ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರ ಜೀವನದ ಆದರ್ಶ ತಿಳಿದುಕೊಳ್ಳಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟವಾಗಿದೆ. ಹಂತದಲ್ಲಿ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಬೆಳೆಸಿಕೊಳ್ಳಬೇಕು. ದೇಶಾಭಿಮಾನ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ಹೇಳಿದರು.

ಯುವ ಸಮೂಹ ಇತ್ತೀಚಿನ ದಿನಗಳಲ್ಲಿ ಹಣಗಳಿಸಲು ಅನ್ಯಮಾರ್ಗ ತುಳಿಯುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿದೆ. ಇದನ್ನು ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳಬೇಕು. ಬೇರೆಯವರಿಗೆ ತಮ್ಮನ್ನು ತಾವು ಹೊಲಿಕೆ ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಯದ ಮೌಲ್ಯ ಅರಿತುಕೊಳ್ಳಿ: ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಮಾತನಾಡಿ, ಇಂದಿನ ಯುವಕರು ನಿರ್ದಿಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಳ್ಳುವುದರೊಂದಿಗೆ ದೇಶಕಟ್ಟುವ ಶಕ್ತಿಗಳಾಗಬೇಕು. ಸಮಯದ ಮೌಲ್ಯ ತಿಳಿದವರು ಮಾತ್ರ ಜೀವನದ ಬೆಲೆ ತಿಳಿದುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಳೆಯಬಾರದು. ಪ್ರತಿನಿತ್ಯ ನಾವು ಮಾಡುವ ಕೆಲಸವನ್ನು ಬರೆದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ನಾವು ಅರ್ಥಪೂರ್ಣ ಜೀವನ ನಡೆಸುತ್ತಿದ್ದೀವಾ..? ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದರು.

Advertisement

ಎಲ್ಲ ಧರ್ಮಗಳ ಸಾರ ಒಂದೇ: ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ಸ್ವಾಮಿ ವೀರೇಶಾನಂದ ಸರಸ್ವತಿ ಆರ್ಶೀವಚನ ನೀಡಿ, ಸ್ವಾಮಿ ವಿವೇಕಾನಂದರು ತಮ್ಮ ವಾಕ್‌ಚಾತುರ್ಯದಿಂದ ಯುವಕರನ್ನು ತಮ್ಮೆಡೆಗೆ ಸೆಳೆಯುತ್ತಿದ್ದರು. ವಿಶ್ವಕ್ಕೆ ಬೆಳಕು ಚೆಲ್ಲಿದ ಮಹಾನ್‌ ವ್ಯಕ್ತಿ. ಷಿಕಾಗೋ ಸಮ್ಮೇಳನದಲ್ಲಿ ಎಲ್ಲ ಧರ್ಮಗಳ ಸಾರ ಒಂದೇ ಎಂದಿದ್ದಾರೆ. ಅಲ್ಲದೇ ಧರ್ಮ ಶ್ರೇಷ್ಠತೆ ಬಗ್ಗೆ ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ.

ಅಂತಹ ಶ್ರೇಷ್ಠ ದೇಶಾಭಿಮಾನಿ ವಿವೇಕಾನಂದರು ಎಂದರು. ಸ್ವಾಮಿ ವಿವೇಕಾನಂದರ ಚಿಂತನೆ, ವಿಚಾರಧಾರೆಗಳನ್ನು ಯುವಕರು ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಮೊದಲು ನಂಬಬೇಕು. ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಆಗ ನಮಗೆ ಯಶಸ್ಸು ದೊರಕುತ್ತದೆ ಎಂದು ಕಿವಿ ಮಾತು ಹೇಳಿದರು.

ಸರ್ಕಾರದ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಎ.ಕೊಟ್ರೇಶ್‌ ಉಪನ್ಯಾಸ ನೀಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಕಾಲೇಜು ಪ್ರಾಂಶುಪಾಲರಾದ ಪೊ›.ಕೆ.ಎಸ್‌.ಜಗದೀಶ್‌ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next