Advertisement

Swami Vivekananda: ಎಲ್ಲವೂ ವಿವೇಕ ಮಯ

03:32 PM Feb 20, 2024 | Team Udayavani |

ಇಡೀ ಭಾರತದಲ್ಲಿ ಅಂಧಕಾರವೇ ಮೈತಳೆದು ನಿಂತಿತ್ತು. ಸ್ವದೇಶಾಭಿಮಾನವನ್ನು ಮರೆತು ಎಲ್ಲರೂ ಮೈಮರೆತಿದ್ದರು. ತನ್ನ ನೆಲದ ಹಿರಿಮೆ, ಶ್ರೇಷ್ಠತೆಯ ಪರಿಜ್ಞಾನವೇ ಇಲ್ಲದೇ ಪಾಶ್ಚಾತ್ಯರ ವೈಭವಕ್ಕೆ ಮಾರುಹೋಗಿದ್ದರು. ಆ ಗಾಢಾಂಧಕಾರದಲ್ಲಿ ಕ್ರಾಂತಿಯ ಸೂರ್ಯನಂತೆ ಮೂಡಿದ, ಭಾರತಾಂಬೆಯ ಬಸಿರನ್ನು ಹಸಿರಾಗಿಸಿ ಉದಿಸಿದ ಮಹಾನ್‌ ವ್ಯಕ್ತಿಯೇ ಸ್ವಾಮೀ ವಿವೇಕಾನಂದರು.

Advertisement

ಭವ್ಯ ಭಾರತದ ಘನ ಪರಂಪರೆ, ಇತಿಹಾಸ, ಚಿಂತನೆ ಇವೆಲ್ಲವುಗಳನ್ನೂ ಏರುಸ್ವರದಲ್ಲಿ ಸಮಸ್ತ ಜನಸ್ತೋಮವೇ ಬೆಕ್ಕಸ ಬೆರಗಾಗುವಂತೆ ಅವರ ಮನದಂಗಳದಲ್ಲಿ ಭಾರತೀಯತೆಯ ಕಿಚ್ಚನ್ನು ಹಚ್ಚಿ ಇದು ನನ್ನ ಭಾರತ. ಉಳಿದೆಲ್ಲಾ ರಾಷ್ಟ್ರಗಳಿಗಿಂತ ನನ್ನ ರಾಷ್ಟ್ರ ಅಗ್ರಮಾನ್ಯ ಎಂಬ ಭಾವ ಜಾಗೃತವಾಗುವಂತೆ ಮಾಡಿದವರು ಪೂಜ್ಯ ವಿವೇಕಾನಂದರು.

ಸುಖಾಸುಮ್ಮನೆ ಅವರನ್ನು ಕ್ರಾಂತಿಯ ಸಂತ ಎಂಬುದಾಗಿ ಸಂಭೋದಿಸಲಿಲ್ಲ. ಅವರು ಇಟ್ಟ ಪ್ರತಿಯೊಂದು ಹೆಜ್ಜೆಯೂ ವೈಚಾರಿಕ ಕ್ರಾಂತಿಯ ಹೆಜ್ಜೆಗಳಾಗಿದ್ದವು. ಕಬ್ಬಿಣದ ಚೂರುಗಳನ್ನು ಸೆಳೆಯುವ ಆಯಸ್ಕಾಂತದಂತೆ ಸಾವಿರಾರು ಜನರನ್ನು ಸ್ವಾಮೀಜಿ ತಮ್ಮ ಸಧ್ವಿಚಾರಗಳೆಂಬ ಬಾಹುಗಳಿಂದ ಬಂಧಿಸಿದರು.

ಸಾವಿರ ನದಿಗಳು ಓಡುತ ಹರಿದು ಕಡಲ ಸೇರುವಂತೆ, ಸಹಸ್ರ ಸಹಸ್ರ ಸಂಖ್ಯೆಯ ಜನರಲ್ಲಿ ವಿವೇಕಾನಂದರೆಂಬ ಮಹಾನ್‌ ಕಡಲನ್ನು ಸೇರುವ ಬಯಕೆ ಪುಟಿದು ಚಿಮ್ಮಲು ಪ್ರಾರಂಭವಾದವು. ಜಡ ಎಂಬ ಬಳ್ಳಿಗಳಿಂದ ಬಂಧಿಸಲ್ಪಟ್ಟು ಲೋಕದ ಪರಿವೆಯೇ ಇಲ್ಲದೆ ನಿದ್ರೆಗೆ ಜಾರಿದವರನ್ನೆಲ್ಲಾ ಏಳಿ ಎದ್ದೇಳಿ!!!’ ಎಂಬ ಕರೆಯ ಮೂಲಕ ಬಡಿದೆಬ್ಬಿಸಿದರು.

ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿಯವರು ಮಾಡಿದ ಭಾಷಣ ಇಡೀ ವಿಶ್ವಕ್ಕೇ ಭಾರತ ಎಂದರೆ ಏನು ಎಂಬುದನ್ನು ಪರಿಚಯಿಸಿತ್ತು. ವಿದೇಶಿಯರಿಗೆ ಬಿಡಿ, ಭಾರತದಲ್ಲಿದ್ದುಕೊಂಡೇ ದೇಶದ ಬಗ್ಗೆ ತಾತ್ಸಾರ, ವಿದೇಶಗಳ ಮೇಲೆ ಆದರವಿದ್ದ ಜನರೂ ಕೂಡ ಭಾರತದ ನೆಲವನ್ನು ಮುಟ್ಟಿ ನಮಸ್ಕರಿಸುವಂತೆ ಮಾಡಿದರು.

Advertisement

ಭಾರತ ಎಂದರೆ ಹಾವಾಡಿಗರ ನಾಡು, ಭಾರತ ಎಂದರೆ ಅನಾಗರಿಕತೆಯ ರಾಷ್ಟ್ರ, ಭಾರತ ಎಂದರೆ ಗೊಡ್ಡು ಸನ್ಯಾಸಿಗಳ ನಾಡು, ಮೂಡನಂಬಿಕೆಗಳ ಬೀಡು ಎಂಬುದಾಗೆಲ್ಲಾ ಅಂದುಕೊಂಡಿದ್ದ ಪಾಶ್ಚಾತ್ಯರಿಗೆ ಒಬ್ಟಾತ ಸನ್ಯಾಸಿ ಭಾರತ ಅನಾಗರಿಕರ ರಾಷ್ಟ್ರವಲ್ಲ; ಜಗತ್ತಿಗೆ ನಾಗರಿಕತೆ ಎಂದರೆ ಏನು ಎಂಬುದನ್ನು ಕಲಿಸಿದ ರಾಷ್ಟ್ರ ಎಂಬುದಾಗಿ ಘರ್ಜಿಸಿದರು.

ವಿದೇಶದಿಂದ ಭಾರತಕ್ಕೆ ಸ್ವಾಮೀಜಿ ಮರಳಿದ ವೇಳೆಗೆ ಹಡಗಿನ ದಂಡೆಯಲ್ಲಿ ಹರಡಿದ್ದ ಮರಳಿನಲ್ಲಿ ಬಿದ್ದು ಹೊರಳಾಡಿ ಭೋಗ ಮೆಟ್ಟಿ ತ್ಯಾಗ ಮೆರೆದ ಪುಣ್ಯಭೂಮಿ ಭಾರತ ಎಂಬದನ್ನು ಜಗತ್ತಿನ ಮುಂದೆ ತಮ್ಮ ನಡೆಯ ಮೂಲಕ ತೋರಿಸಿಕೊಟ್ಟರು. ಆಹಾ!!!! ಎಂತಹ ಮಹಾತ್ಮ ನಮ್ಮ ವಿವೇಕಾನಂದರು. ಇಂತಹ ಚೇತನ ನಡೆದಾಡಿದ ಈ ಪುಣ್ಯಭೂಮಿಯಲ್ಲಿ ಜನ್ಮ ತಾಳಿದ ನಮ್ಮದು ಯಾವ ಪೂರ್ವಜನ್ಮದ ಪುಣ್ಯವೋ. ದೇವನೊಬ್ಬನೇ ಬಲ್ಲ.

ಧ್ಯಾನಸ್ಥ ಕಂಗಳಲ್ಲಿ ವಿವೇಕಾನಂದರು ಅಂದು ಕಂಡ ಭಾರತ ಇಂದು ನಮ್ಮ ಮುಂದಿದೆಯೇ ಎಂಬುದರ ಬಗ್ಗೆ ಯೋಚಿಸುವ ಅನಿವಾರ್ಯತೆ ನಮಗಿದೆ. ಅಲ್ಲೋ ಇಲ್ಲೋ ಅಹುದು ಎಂದೆನಿಸಿದರೂ ಹೆಚ್ಚಿನ ಭಾಗ ಇಲ್ಲ ಎಂದೇ ಹೇಳುತ್ತದೆ. ವಿವೇಕಾನಂದರ ಕನಸಿನ ಕೂಸುಗಳೆಂದರೆ ಅದು ಯುವಕರು. ಆದರೆ ಒಮ್ಮೆ ಇಂದಿನ ಯುವಕರ ಪರಿಸ್ಥಿತಿಯನ್ನು ಯೋಚಿಸಿದರೆ ವಿವೇಕಾನಂದರು ಭವ್ಯ ಭಾರತವನ್ನು ಕಟ್ಟುವ ಕನಸನ್ನು ಕೈಬಿಡಬೇಕಾದೀತು ಎಂದೆನಿಸುತ್ತದೆ.

ಸ್ವಾಮೀಜಿಯವರ ಪ್ರಕಾರ ಕೇವಲ ಗಡ್ಡ ಮೀಸೆ ಮೂಡಿದರೆ ಮಾತ್ರ ಅವರು ಯುವಕರಾಗುವುದಿಲ್ಲ, ಬದಲಾಗಿ ಅಪಾರವಾದ ಜ್ಞಾನವನ್ನು ಸಂಪಾದಿಸಿ ರಾಷ್ಟ್ರದ ಹಿತವನ್ನು ಬಯಸಿ ಅದಕ್ಕೋಸ್ಕರ ಸಮಯವನ್ನು ಮೀಸಲಿಟ್ಟು, ಇಂದ್ರಿಯಗಳನ್ನು ಹಿಡಿತದಲ್ಲಿರಿಸಿ, ವ್ಯವಸ್ಥೆಯೊಂದನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಇಲ್ಲವೇ ವ್ಯವಸ್ಥೆ ಸರಿ ಇಲ್ಲದೇ ಇದ್ದರೆ ಸಮರ್ಥವಾಗಿ ವಿರೋಧಿಸಿ ಅದನ್ನು ಸರಿಪಡಿಸುವಂತಹ ಸಾಮರ್ಥ್ಯವನ್ನೂ ಮೈಗೂಡಿಸಿಕೊಂಡು, ಎಂತಹ ಸಂಧರ್ಭವೇ ಬರಲಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೇ ಬದುಕುವವನೇ ನಿಜವಾದ ಯುವಕ.

ಆದರೆ ಇಂದಿನ ಯುವಕರು ಇದೆಲ್ಲದಕ್ಕೂ ತದ್ವಿರುದ್ಧವಾಗಿಯೇ ಬದುಕುತ್ತಿದ್ದಾರೆ ಎಂಬುದು ಶೋಚನೀಯವಲ್ಲದೇ ಮತ್ತೇನು. ಜ್ಞಾನವೆಂದರೆ ಕೇವಲ ಪಠ್ಯಪುಸ್ತದ ಜ್ಞಾನವಲ್ಲ, ಪಠ್ಯದ ಜತೆಗೆ ನಾವು ಸಂಪಾದಿಸಬೇಕಾಗಿರುವುದು ಲೋಕಜ್ಞಾನವನ್ನು. ಲೋಕಜ್ಞಾನವಿಲ್ಲದೇ, ಸಾಮಾನ್ಯ ಜ್ಞಾನವೂ ಇಲ್ಲದೇ ಕೇವಲ ಪುಸ್ತಕದ ಬದನೇಕಾಯಿ ಎಂಬಂತಿರುವ ಯುವಕರಿಂದ ಭವ್ಯ ಭಾರತವನ್ನು ಕಟ್ಟಲು ಸಾಧ್ಯವೇ? ಯುವಕರೆಂದರೆ ಸದೃಢರಾಗಿರಬೇಕು ಅದು ಮಾನಸಿಕವಾಗಿರಲಿ ಅಥವಾ ಶಾರೀರಿಕವಾಗಿರಲಿ ಒಟ್ಟಿನಲ್ಲಿ ಬಲಿಷ್ಠರಾಗಿರಬೇಕು.

ಮಾದಕತೆಯ ಜಾಲದಿಂದಾಗಿ ತಂಬಾಕು, ಸಿಗರೇಟು, ಮಧ್ಯ, ಗುಟ್ಕಾ ಇವುಗಳೇ ಪರಮಸುಖ, ಇದುವೇ ಮೋಕ್ಷಕ್ಕಿರುವ ಮಾರ್ಗ ಎಂದು ತಿಳಿದು ಮೋದಕ್ಕೋಸ್ಕರ ಪ್ರಾರಂಭಿಸಿ ಪ್ರಮಾದ ಮಾಡಿಕೊಳ್ಳುವ ಯುವಕ ಅಥವಾ ಯುವತಿಯರಿಂದ ವಿವೇಕಾನಂದರ ಕನಸಿನ ಭಾರತವನ್ನು ಕಟ್ಟುವುದು ಸಾಧ್ಯವೇ? ಇತ್ತೀಚಿನ ದಿನಗಳಲ್ಲಿ ಪುಸ್ತಕಗಳು ಗೆದ್ದಲುಗಳಿಗೆ ಆಹಾರವಾಗುತ್ತಿದೆ ಮೊಬೈಲ್‌ ಮೆದುಳಿಗೆ ಆಹಾರವಾಗುತ್ತಿದೆ.

ಎಂತಹ ವಿಪರ್ಯಾಸ ಅಲ್ಲವೇ? ಸಿಂಹವು ಹಣ್ಣು ತರಕಾರಿಗಳನ್ನು ತಿಂದು ಜಿಂಕೆಯೊಂದು ಹಸಿ ಮಾಂಸವನ್ನು ತಿಂದರೆ ಹೇಗಾದೀತು? ಈ ಪರಿಸ್ಥಿತಿಯೂ ಅದೇ ಆಗಿದೆ. ಇವ್ಯಾವುದೂ ವಿವೇಕಾನಂದರು ಕಂಡ ಯುವಕರ ಲಕ್ಷಣಗಳೇ ಅಲ್ಲ. ವಿವೇಕಾನಂದರು ಬಯಸಿದ ಯುವಕರು ಗುಡ್ಡವೊಂದನ್ನು ತೋರಿಸಿದರೆ ಕುಟ್ಟಿ ಪುಡಿ ಮಾಡಲೇ ಎಂದು ಕೇಳುವಂತವರಾಗಬೇಕು, ಅಪಾರ ರಾಷ್ಟ್ರಪ್ರೇಮ ಅವರಲ್ಲಿ ಉಕ್ಕುತ್ತಿರಬೇಕು. ಆದರೆ ಇದ್ಯಾವುದೂ ಇಲ್ಲದೇ ಇಂದಿನ ಯುವಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೃಶರಾಗಿ ಹೋಗಿದ್ದಾರೆ.

ಹಾಗಾದಾರೆ ವಿವೇಕಾನಂದರ ಕನಸು ಕೇವಲ ಕನಸಾಗಿಯೇ ಉಳಿಯಬೇಕೇ? ಖಂಡಿತವಾಗಿಯೂ ಇಲ್ಲ. ಯುವ ಮನಗಳಲ್ಲಿ ಸೀಮೋಲ್ಲಂಘನದ ತವಕ ಹೆಚ್ಚಾಗಬೇಕು, ನನ್ನಿಂದಲೂ ಏನಾದರೂ ಸಾಧ್ಯ ಇದೆ ಎಂಬ ಆತ್ಮವಿಶ್ವಾಸ ಉದ್ಧೀಪನಗೊಳ್ಳಬೇಕು. ಸ್ವಾರ್ಥವನ್ನು ಬಿಟ್ಟು ಸಮಾಜದ ಕಡೆಗೆ ಲಕ್ಷ್ಯವನ್ನಿಡಬೇಕು. ಆಗ ಮಾತ್ರ ವಿವೇಕಾನಂದರ ಕನಸು ನನಸಾಗಲು ಸಾಧ್ಯ.

ಯಾರಿಗೂ ಇನ್ನು ವಿವೇಕಾನಂದರಾಗಲು ಸಾಧ್ಯವಿಲ್ಲ ಜಗಕ್ಕೊಬ್ಬರೇ ವಿವೇಕಾನಂದ. ಆದರೆ ಅವರು ತೋರಿದ ದಾರಿ ನಮಗೆಲ್ಲರಿಗೂ ಪ್ರೇರಣೆ ಅವರು ಹಾಕಿಕೊಟ್ಟ ಸತಥದಲ್ಲಿ ಮುನ್ನಡೆಯಲು ನಮಗೆ ಖಂಡಿತವಾಗಿಯೂ ಸಾಧ್ಯವಿದೆ. ಯುವಮನಸ್ಸುಗಳು ಒಂದಾಗಿ ಒಂದೇ ವಿಚಾರದ ಅಡಿಯಲ್ಲಿ ಸೇರಿ ಆ ವಿಚಾರದ ಅನುಷ್ಠಾನಕ್ಕಾಗಿ ಪ್ರಾಣವನ್ನು ಕೊಡುವವನಲ್ಲ, ಬದಲಾಗಿ ಸಮಯವನ್ನು ಕೊಟ್ಟು ಆ ವಿಚಾರಕ್ಕಾಗಿ ಬದುಕಬೇಕು. ಆಗ ವಿವೇಕಾನಂದರು ಕಂಡ ಬಲಿಷ್ಠ ಭಾರತ ನಮ್ಮ ಮುಂದೆ ಎದ್ದು ನಿಲ್ಲಲಿದೆ. ಈ ತನುವು ಬಲವುಡುಗಿ ಬಿದ್ದು ಹೋಗುವ ಮುನ್ನ ಬಯಕೆ ಕಂಗಳ ಕಾಂತಿ ಕುಂದಿ ಹೋಗುವ ಮುನ್ನ ಭವ್ಯ ಬಲಿಷ್ಠವಾದ ರಾಷ್ಟ್ರವನ್ನು ನಾವು ಕಟ್ಟುವೆವು ಎಂಬ ಮಹಾನ್‌ ಪ್ರತಿಜ್ಞೆಯೊಂದನ್ನು ನಾವಿಂದು ಮಾಡಬೇಕಾಗಿದೆ.

ವಿವೇಕಾನಂದರು ತಮ್ಮ ದೇಹತ್ಯಾಗ ಮಾಡುವಂತಹ ಸಮಯದಲ್ಲಿ ಶಿಷ್ಯರೊಬ್ಬರು ಅವರಲ್ಲಿ ಸ್ವಾಮೀಜಿ ನೀವು ಹೋಗಲೇಬೇಕೆ ಎಂದು ಕೇಳಿದರು. ಆಗ ಸ್ವಾಮೀಜಿ ಹೌದು ದೊಡ್ಡ ಮರದ ನೆರಳಿನಲ್ಲಿ ಇತರ ಗಿಡಗಳು ಬೆಳೆಯಲಾರವು. ಚಿಕ್ಕವರು ಬೆಳೆಯಲು ಅವಕಾಶ ಮಾಡಿಕೊಡುವುದಕ್ಕಾಗಿ ನಾನು ಹೋಗಲೇಬೇಕು ಎಂದು ಉತ್ತರಿಸುತ್ತಾರೆ.

ವಿವೇಕಾನಂದರು, ಯುವಕರಾದ ನಾವೆಲ್ಲರೂ ತ್ರಿವಿಕ್ರಮನಂತೆ ಬೆಳೆಯಬೆಳೆದು ಈ ರಾಷ್ಟ್ರಕ್ಕೆ ಕೀರ್ತಿಯನ್ನು ತಂದುಕೊಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದರು. ಅವರ ಆಸೆಯನ್ನು ಈಡೇರಿಸಲು ನಾವೆಲ್ಲರೂ ಕಟಿಬದ್ಧರಾಗೋಣ. ವಿವೇಕಾನಂದರ ದೇಹ ಇಂದು ನಮ್ಮೊಂದಿಗಿಲ್ಲ, ಆದರೆ ಅವರು ತಮ್ಮ ವಿಚಾರದ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ವ್ಯಕ್ತಿ ಶಾಶ್ವತವಲ್ಲ ವಿಚಾರ ಎಂದೆಂದಿಗೂ ಶಾಶ್ವತ.

-ವಿಕಾಸ್‌ ರಾಜ್‌ ಪೆರುವಾಯಿ

ವಿ.ವಿ. ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next