ನಾಳೆ (ಜ. 30) ಗಾಂಧೀಜಿ ಪುಣ್ಯತಿಥಿ. 1948 -ಜ. 30ರ ಗಾಂಧೀಜಿ ಹತ್ಯೆಗೂ,1926-ಡಿ. 23ರ ಮುನ್ಶಿರಾಮ್ (ಸ್ವಾಮಿ ಶ್ರದ್ಧಾನಂದರು) ಕೊಲೆಗೂ ಸಾಮ್ಯ ಕಂಡುಬರುತ್ತದೆ.
ಪ್ರತಿರೋಧ ವ್ಯಕ್ತಪಡಿಸುವುದಕ್ಕಾಗಿ ಬರೇಲಿಯಲ್ಲಿ ನಡೆದ ದಯಾನಂದ ಸರಸ್ವತಿಯವರ ಉಪನ್ಯಾಸಕ್ಕೆ ತೆರಳಿದ ಉತ್ತರ ಪ್ರದೇಶ ಮೂಲದ ಮುನ್ಶಿರಾಮ್ (1856-1926) ಬಳಿಕ ಅವರ ಶಿಷ್ಯರಾಗಿ 1902ರಲ್ಲಿ ಹರಿದ್ವಾರ ಸಮೀಪದ ಕಾಂಗರಿಯಲ್ಲಿ ಗುರುಕುಲವನ್ನು (ಈಗ ಗುರುಕುಲ್ ಕಾಂಗರಿ ಡೀಮ್ಡ್ ವಿ.ವಿ.) ಆರಂಭಿಸಿದರು. ಪತ್ರಿಕೆಗಳ ಜತೆ ಮಹಿಳಾ ಶಿಕ್ಷಣ, ಹಿಂದಿ ಪ್ರಚಾರದಲ್ಲಿ ಮಹತ್ವದ ಕೊಡುಗೆ ನೀಡಿದರು.
ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಬಂದದ್ದಷ್ಟೆ. ಕಾಂಗರಿ ಗುರುಕುಲಕ್ಕೆ 1915ರ ಎಪ್ರಿಲ್ 8ರಂದು ಭೇಟಿ ಕೊಟ್ಟರು. ಗಾಂಧೀಜಿಯವರಿಗೆ ಸಮ್ಮಾನಪತ್ರ ಕೊಟ್ಟು ಗೌರವಿಸಲು ನಿರ್ಧರಿಸಿದಾಗ ಹೇಗೆ ಸಂಬೋಧಿಸಬೇಕೆಂದು ಮುನ್ಶಿರಾಮ್‌ರಿಗೆ ಗೊಂದಲ ಉಂಟಾಗಿ ವಿದ್ಯಾರ್ಥಿಯಾಗಿ ಬಳಿಕ ಶಿಕ್ಷಕರಾಗಿದ್ದ ಬೆಂಗಳೂರಿನ ಪಂಡಿತ್ ಸುಧಾಕರ ಚತುರ್ವೇದಿ (1897-2020) ಅವರನ್ನು ಕೇಳಿದರು. “ಹೇಗಿದ್ದರೂ ಸನ್ಯಾಸ ತೆಗೆದುಕೊಳ್ಳುತ್ತೀರಿ. ನಿಮಗೇಕೆ “ಮಹಾತ್ಮಾ’ ಗುಣವಾಚಕ? ಅದನ್ನೇ ಕೊಟ್ಟುಬಿಡಿ” ಎಂದಾಗ ಭಾಷಣದಲ್ಲಿ “ಮಹಾತ್ಮಾ ಗಾಂಧೀಜಿ’ ಎಂದು ಸಂಬೋಧಿಸಿದರು. ಅಂದಿನಿಂದ ಗಾಂಧೀಜಿ ಜನರ ಬಾಯಲ್ಲಿ “ಮಹಾತ್ಮ’ ಆದರು. ಗಾಂಧೀಜಿಯವರು “ಲಡಾR ಹೋಶಿಯಾರ್ ಹೈ’ ಎಂದು ತನ್ನ ಜತೆ ಕೆಲಸ ಮಾಡಲು ನನ್ನನ್ನು ಕರೆದರು. “ಮುಂದೆ ನಾವಿಬ್ಬರೂ ಪರಸ್ಪರ ಒದ್ದಾಡುತ್ತೇವೆಂದು ಗಾಂಧೀಜಿಗೂ, ನನಗೂ ಗೊತ್ತಿರಲಿಲ್ಲ’ ಎಂದು ಚತುರ್ವೇದಿ ಹೇಳಿಕೊಂಡಿದ್ದಾರೆ.
1916ರಲ್ಲಿ ಮುನ್ಶಿರಾಮ್ ಸ್ವಾಮಿ ಶ್ರದ್ಧಾನಂದರಾದರು. 1917ರಲ್ಲಿ ಗುರುಕುಲವನ್ನು ಬಿಟ್ಟು ಹಿಂದು ಸಮಾಜದ ಸುಧಾರಣೆ, ವಿಶೇಷವಾಗಿ ಅಸ್ಪೃಶ್ಯತೆ ನಿವಾರಣೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡರು. 1919ರ ಎಪ್ರಿಲ್ 19ರಂದು ಅಮೃತಸರದಲ್ಲಿ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ನಡೆದ ಬಳಿಕ ಡಿ. 27ರಿಂದ ಜ. 1ರ ವರೆಗೆ ಅಲ್ಲೇ ಮೋತಿಲಾಲ್ ನೆಹರೂ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಹತ್ಯಾಕಾಂಡ ನಡೆದದ್ದಷ್ಟೆಯಾದ ಕಾರಣ ಅಧಿವೇಶನ ನಡೆಸಲು ಹಿಂಜರಿಕೆ ಇತ್ತು. ಶ್ರದ್ಧಾನಂದರು ಧೈರ್ಯ ತುಂಬಿ ಜವಾಬ್ದಾರಿ ಹೊತ್ತರು. ಹಾಕಿದ್ದ ಭಾರೀ ಚಪ್ಪರ ಮಳೆಯಿಂದ ಹಾಳಾಯಿತು. ಪ್ರತಿನಿಧಿಗಳಿಗೆ ಮನೆ ಮನೆಗಳಲ್ಲಿ ಅವಕಾಶ ಕೊಡಲು ಶ್ರದ್ಧಾನಂದರು ಕೇಳಿದಾಗ ಎಲ್ಲರೂ ಒಪ್ಪಿದರು. ಸಿಕ್ಖ್ , ಮುಸ್ಲಿಮರ ಮನೆಗಳೇ ಅಲ್ಲಿದ್ದದ್ದನ್ನು ನೋಡಿ “ಈ ಸನ್ಯಾಸಿ ಕರಾಮತ್ತು ಎಂಥದ್ದು?’ ಎಂದು ಗಾಂಧೀಜಿ ಅಚ್ಚರಿಪಟ್ಟಿದ್ದರು. ಅಸ್ಪೃಶ್ಯತೆ ಮತ್ತು ಮತಾಂತರದ ವಿರುದ್ಧ ಏಕಕಾಲದಲ್ಲಿ ಕಾರ್ಯತಃ ಸಮರ ಸಾರಿದ ಶ್ರದ್ಧಾನಂದರು, 1923ರಲ್ಲಿ ಕಾಕಿನಾಡ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದ ಮೌಲಾನಾ ಮಹಮ್ಮದ್ ಅಲಿ ಬಹಿರಂಗವಾಗಿ ಮತಾಂತರದ ಬಗ್ಗೆ ಹೇಳಿದಾಗ ಮತ್ತು ಮೋತಿಲಾಲ್ ನೆಹರೂ ಆಡಿದ ಮಾತಿನಿಂದ ನೊಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಷ್ಟೇ ಅಲ್ಲ, ರಾಜಕೀಯಕ್ಕೇ ವಿದಾಯ ಹಾಡಿದರು.
ಆಗ್ರಾ, ಮಥುರಾದಲ್ಲಿ ಮಲ್ಕಾನ (ಮೇವ್ಸ್) ಸಮುದಾಯದವರು ಇಸ್ಲಾಂಗೆ ಮತಾಂತರಗೊಂಡವರು. ಅರ್ಧ ಹಿಂದೂ, ಅರ್ಧ ಇಸ್ಲಾಂ ಧರ್ಮವನ್ನು ಆಚರಿಸುತ್ತಿದ್ದರು. “ಮೇವ್ ಮಹಾಸಭಾ’ ಸಂಘಟನೆಯ ಮನವಿ ಮೇರೆಗೆ ಸುಮಾರು ಒಂದು ಲಕ್ಷ ಜನರನ್ನು ಶ್ರದ್ಧಾನಂದರು ಮಾತೃಧರ್ಮಕ್ಕೆ ಬರಮಾಡಿಕೊಂಡರು. ಇದೇ ವೇಳೆ ಕರಾಚಿಯಿಂದ ಬೇಗಮ್ ಎಂಬಾಕೆ ಆರ್ಯ ಸಮಾಜಕ್ಕೆ ಸೇರಲು ಬಂದರು. ಇದರಿಂದ ಸಂಘರ್ಷ ತೀವ್ರವಾಯಿತು. ಈ ನಡುವೆಯೂ ಚಿಕಿತ್ಸೆ ನೀಡುತ್ತಿದ್ದ ಡಾ| ಅನ್ಸಾರಿ ಸಹಿತ ಅನೇಕ ಮುಸ್ಲಿಮರು ಶ್ರದ್ಧಾನಂದರಿಗೆ ಆತ್ಮೀಯರಾಗಿದ್ದರು. 1922ರಲ್ಲಿ “ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಗಾಂಧೀಜಿಯವರು ಶ್ರದ್ಧಾನಂದರನ್ನು ಅಶಾಂತಿ ಹರಡುತ್ತಿದ್ದೀರಿ ಎಂದು ಉಗ್ರವಾಗಿ ಟೀಕಿಸಿದ್ದರೂ ಡಾ|ಬಿ.ಆರ್.ಅಂಬೇಡ್ಕರ್ ಅವರು 1922ರಲ್ಲಿಯೇ “ಸ್ವಾಮಿ ಶ್ರದ್ಧಾನಂದ್ ದಿ ಗ್ರೇಟೆಸ್ಟ್ ಆ್ಯಂಡ್ ಮೋಸ್ಟ್ ಸಿನ್ಸಿಯರ್ ಚಾಂಪಿಯನ್ ಆಫ್ ದಿ ಅನ್‌ಟಚೆಬಲ್ಸ್’ ಎಂದು ಬಣ್ಣಿಸಿದ್ದರು. 1926ರ ಡಿ. 23ರ ಸಂಜೆ ದಿಲ್ಲಿಯಲ್ಲಿ ಶ್ರದ್ಧಾನಂದರು ನ್ಯುಮೋನಿಯಾದಿಂದ ಬಳಲುತ್ತಿದ್ದಾಗ ಇಸ್ಲಾಂ ಬಗೆಗೆ ಚರ್ಚೆ ನಡೆಸಲು ಎಂದು ಬಂದಿದ್ದ ಅಬ್ದುಲ್ ರಶೀದ್ ಬಚ್ಚಿಟ್ಟುಕೊಂಡಿದ್ದ ಗುಂಡನ್ನು ಹಾರಿಸಿದಾಗ ಪ್ರಾಣ ಹೋಯಿತು. ಗುವಾಹಾಟಿಯ ಕಾಂಗ್ರೆಸ್ ಅಧಿವೇಶನದಲ್ಲಿದ್ದ ಗಾಂಧೀಜಿಗೆ ಸುದ್ದಿ ತಲುಪಿದಾಗ ತೆಗೆದ ಮೊದಲ ಉದ್ಗಾರ “ಅವರಿಗೆ ಬಂದ ಸಾವೇ ನನಗೂ ಬರಲಿ…’
ವೈಸ್‌ರಾಯ್‌ಗೆ ಶ್ರದ್ಧಾನಂದರ ಮಗ ಪ್ರೊ|ಇಂದ್ರ ವಾಚಸ್ಪತಿ ಪತ್ರ ಬರೆದು “ನನ್ನ ತಂದೆಗೆ ಕೊನೆಯ ಕ್ಷಣದಲ್ಲಿ ಮಾತನಾಡಲು ಸಾಧ್ಯವಾಗಿದ್ದರೆ ಕೊಲೆ ಮಾಡಿದವನನ್ನು ಗಲ್ಲಿಗೇರಿಸಬೇಡಿ ಎಂದು ಹೇಳುತ್ತಿದ್ದರು. ನಾನೂ ಅವರ ಮಾತನ್ನು ಮಗನಾಗಿ ಹೇಳುತ್ತೇನೆ’ ಎಂದಿದ್ದರು. 1948ರ ಜ. 30ರಂದು ಗಾಂಧೀಜಿ ಸಾವೂ ಹೀಗೆಯೇ ಸಂಭವಿಸಿದಾಗಲೂ ಗಾಂಧೀಜಿ ಪುತ್ರರಾದ ರಾಮದಾಸ್, ಮಣಿಲಾಲ್ ಇದೇ ರೀತಿ ಹೇಳಿದ್ದರು. ನಿಸರ್ಗ (ವಿಧಿ) ಯಾರಿಂದ ಯಾವಾಗ ಏನನ್ನು ಹೇಳಿಸುತ್ತದೋ, ಮಾಡಿಸುತ್ತದೋ ತಿಳಿಯದು. ಮುಂದೊಂದು ದಿನ ತಾಳೆ ಹಾಕಿದಾಗ ಅದರ ಗತಿ ಅಲ್ಪಸ್ವಲ್ಪ ಗೋಚರಿಸಲೂಬಹುದು. ಬಿರುದು ಕೊಟ್ಟವರು, ಪಡೆದವರು “ಮಹಾ’ “ಆತ್ಮ’ ಅಲ್ಲವೆ?
-ಮಟಪಾಡಿ ಕುಮಾರಸ್ವಾಮಿ