ಹೈದರಾಬಾದ್ : ಮೂರು ಬಾಂಬಿಂಗ್ ಪ್ರಕರಣದಲ್ಲಿ ಶಾಮೀಲಾಗಿದ್ದರೆಂಬ ಆರೋಪದ ಮೇಲೆ ಆರು ವರ್ಷಗಳ ಹಿಂದೆ ಬಂಧಿತರಾಗಿದ್ದ ಸ್ವಾಮಿ ಅಸೀಮಾನಂದ ಅವರು ಇಂದು ಶುಕ್ರವಾರ ಹೈದರಾಬಾದ್‌ನ ಜೈಲಿನಿಂದ ಇಂದು ಜಾಮೀನಿನ ಮೇಲೆ ಬಿಡುಗಡೆಗೊಳ್ಳಲಿದ್ದಾರೆ.
2007ರ ಮೆಕ್ಕಾ ಮಸೀದಿ ಬಾಂಬಿಂಗ್ ಕೇಸಿಗೆ ಸಂಬಂಧಪಟ್ಟು ಅಸೀಮಾನಂದ ಅವರಿಗೆ ನಿನ್ನೆ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಶರ್ತಗಳ ಪ್ರಕಾರ ಅಸೀಮಾನಂದ ಅವರು ಕೋರ್ಟ್ ಅನುಮತಿ ಇಲ್ಲದೆ ನಗರದಿಂದ ಹೊರಹೋಗುವಂತಿಲ್ಲ; ಬಿಡುಗಡೆಗೆ ಮುನ್ನ ತಲಾ 50,000 ರೂ. ಗಳ ಎರಡು ಭದ್ರತೆಯನ್ನು ನೀಡಬೇಕು.
ಅಸೀಮಾನಂದ ಅವರೊಂದಿಗೆ ಸಹ ಆರೋಪಿ ಭರತ್ ಮೋಹನ್‌ಲಾಲ್ ಅಲಿಯಾಸ್ ಭರತ್ ಭಾಯಿ ಅವರಿಗೂ ನ್ಯಾಯಾಲಯ ಜಾಮೀನು ಬಿಡುಗಡೆಯನ್ನು ಮಂಜೂರು ಮಾಡಿದೆ.
2007ರ ಮೇ 18ರಂದು 9 ಜೀವಗಳನ್ನು ಬಲಿಪಡೆದಿದ್ದ ಮೆಕ್ಕಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿ ಸ್ವಾಮಿ ಅಸೀಮಾನಂದ (ಇವರ ನಿಜನಾಮ ನಬ ಕುಮಾರ್ ಸರ್ಕಾರ್) ಅವರನ್ನು ಹರಿದ್ವಾರದಲ್ಲಿ 2010ರ ನವೆಂಬರ್ 19ರಂದು ಬಂಧಿಸಲಾಗಿತ್ತು.
ಈ ವರ್ಷ ಮಾರ್ಚ್ 8ರಂದು ಅಸೀಮಾನಂದ ಮತ್ತು ಇತರ ಆರು ಆರೋಪಿಗಳನ್ನು ಅಜ್‌ಮೇರ್ ಬ್ಲಾಸ್ಟ್ ಕೇಸಿಗೆ ಸಂಬಂಧಪಟ್ಟು ಜೈಪುರ ನ್ಯಾಯಾಲಯವು ಖುಲಾಸೆಗೊಳಿಸಿತ್ತು.