ಬೆಂಗಳೂರು: ಸ್ವಚ್ಛ ಸರ್ವೇಕ್ಷಣ್‌ದಲ್ಲಿ ಸತತ ನಾಲ್ಕನೇ ಬಾರಿ “ಸ್ವಚ್ಛ ನಗರ’ ಹೆಗ್ಗಳಿಕೆಗೆ ಪಾತ್ರವಾದ ಇಂದೋರ್ ಮಾದರಿಗೆ ಮತ್ತೆ ಬಿಬಿಎಂಪಿ ಸದ್ದಿಲ್ಲದೆ ಮೊರೆಹೋಗುತ್ತಿದೆ.
ನಗರದಲ್ಲಿ ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹ ಮಾಡುವುದು ಹಾಗೂ ಕಸ ವಿಲೇವಾರಿ ವ್ಯವಸ್ಥೆ (ಸಲಹೆ ಮತ್ತು ಮಾರ್ಗಸೂಚಿಗೆ) ಅಳವಡಿಕೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅನುಮೋದನೆ ಎದುರು ನೋಡುತ್ತಿದೆ.
ಕಸ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆ ಕುರಿತು ಇಂದೋರ್‌ನ ತಜ್ಞರ ತಂಡವು ವರದಿ ನೀಡಿದ್ದು, ಇದಕ್ಕೆ ಎರಡು ಕೋಟಿರೂ. ಬಿಲ್ ಕೂಡ ಮಾಡಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ಹಾಗೂ ಆರೋಗ್ಯ) ರಂದೀಪ್, ಮುಂದಿನ ದಿನಗಳಲ್ಲಿ ನಗರದಲ್ಲಿ ಕಸ ನಿರ್ವಹಣೆ ಸಂಬಂಧ ಸಲಹೆ, ಮಾರ್ಗಸೂಚಿ ಹಾಗೂ ಇಂದೋರ್ ಮಾದರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಎರಡು ಕೋಟಿ ರೂ. ಪ್ರಸ್ತಾವನೆ ಇದೆ. ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇನ್ನೂ ಅನುಮೋದನೆಯಾಗಿಲ್ಲ. ಈ ಸಂಬಂಧ ಸರ್ಕಾರವು ಕೆಲವು ಸ್ಪಷ್ಟನೆ ಹಾಗೂ ವಿವರಗಳನ್ನು ಕೇಳಿದ್ದು, ಇದಕ್ಕೆ ಪೂರಕ ಮಾಹಿತಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಇಂದೋರ್ ಮಾದರಿ ಜಾರಿಗೆ ಕ್ರಮ: ಇಂದೋರ್‌ನಲ್ಲಿ ಕಸ ವಿಲೇವಾರಿಗೆ ಉತ್ತಮ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೀಗಾಗಿಯೇ ಪ್ರತಿ ವರ್ಷವೂ ಇಂದೋರ್ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಅಲ್ಲಿ ಕಸವಿಲೇವಾರಿಗೆ ಯಾವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ? ಕಸ ಭೂಭರ್ತಿಗೆ ಸಾಗಿಸುವುದು ಕಡಿಮೆ ಮಾಡುವುದು ಹೇಗೆ? ಹಸಿಕಸ ಸಂಸ್ಕರಣಾ ಘಟಕ ಉನ್ನತೀಕರಣ, ಬಯೋಮಿಥನೈಸೇಷನ್ ಹಾಗೂ ಅನುಪಯುಕ್ತ ವಸ್ತುಗಳ ಮರುಬಳಕೆ ಮಾಡುವುದು, ಹಸಿತ್ಯಾಜ್ಯ ಘಟಕಗಳ ನಿರ್ವಹಣೆ ಹಾಗೂ ನಿಯಂತ್ರಣ ಕೊಠಡಿ ಸೇರಿದಂತೆ ಹಲವು ವಿಚಾರಗಳಲ್ಲಿ ಇಂದೋರ್ ಮಾದರಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಇಂದೋರ್‌ನಲ್ಲಿ ಈ ವಿಚಾರಗಳಲ್ಲಿ ಉತ್ತಮ ವ್ಯವಸ್ಥೆ ರೂಪಿಸಿದ್ದು, ಇದೇ ಮಾದರಿಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೂ ಅಳವಡಿಸಿಕೊಳ್ಳಲಾಗುವುದು ಎಂದು ರಂದೀಪ್ ಅವರು “ಉದಯವಾಣಿ’ಗೆ ತಿಳಿಸಿದರು.
ಕಸ ಸಂಗ್ರಹ ಹಾಗೂ ವಿಲೇವಾರಿ ಜಾಗೃತಿ : ಇಂದೋರ್‌ನಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿಗೆ ಮಾಹಿತಿ, ಜಾಗƒತಿ ಹಾಗೂ ಶಿಕ್ಷಣ ಎಂಬ ಮೂರು ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಕಸ ವಿಲೇವಾರಿ ಅಲ್ಲಿ ಕಗ್ಗಂಟಾಗಿಲ್ಲ. ಅದೇ ರೀತಿ ಬೆಂಗಳೂರಿನಲ್ಲೂ ಈ ಮಾದರಿ ಅಳವಡಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.