ರಾಯಚೂರು: ಸ್ವಚ್ಛ ಸರ್ವೇಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ರಾಯಚೂರು ನಗರಸಭೆಗೆ ಕೊನೆ ಸ್ಥಾನ ಲಭಿಸಿದೆ. ರಾಜ್ಯದ 25ರ ಪೈಕಿ 24ನೇ ಸ್ಥಾನ ಪಡೆದಿದ್ದು, ಸ್ವತ್ಛತೆಯಲ್ಲೂ ಹಿಂದುಳಿದ ಕೀರ್ತಿಗೆ ಪಾತ್ರವಾಗಿದೆ.
ನಗರಗಳ ಸ್ವಚ್ಛತೆ, ಕಸ ವಿಲೇವಾರಿಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಕಳೆದ ಕೆಲ ವರ್ಷಗಳಿಂದ ಸಮೀಕ್ಷೆ ನಡೆಸಿ ರ್‍ಯಾಂಕ್ ಗಳನ್ನು ನೀಡುತ್ತಿದೆ. ಸುಂದರ ನಗರಗಳಿಗೆ ಪ್ರಶಸ್ತಿ ಗರಿಮೆಯೂ ನೀಡುತ್ತಿದೆ. ಆದರೆ, ಈ ಸಮೀಕ್ಷೆಯಲ್ಲಿ ರಾಯಚೂರು ಪುನಃ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟಿದೆ. ದೇಶದ ನಗರಗಳಿಗೆ ಹೋಲಿ ಸಿದರೆ 344 ನೇ ಸ್ಥಾನ ಸಿಕ್ಕರೆ ರಾಜ್ಯದ ರ್‍ಯಾಂಕಿಂಗ್‌ನಲ್ಲಿ 24ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಗೆ ಕೊನೆ ಸ್ಥಾನಗಳೇ ಕಾಯಂ ಎನಿಸಿವೆ. 2017ರಲ್ಲಿ 328, 2018ನೇ ಸಾಲಿನಲ್ಲಿ 370 ನೇ ರ್‍ಯಾಂಕ್ ಸಿಕ್ಕಿದ್ದರೆ, 2019ನೇ ಸಾಲಿನಲ್ಲಿ 413ನೇ ಸ್ಥಾನ ಸಿಕ್ಕಿತ್ತು. ಅಭಿವೃದ್ಧಿಯಲ್ಲಿ, ಶೈಕ್ಷಣಿಕ ಪ್ರಗತಿಯಲ್ಲಿ, ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿಯೂ ಜಿಲ್ಲೆ ಹಿಂದುಳಿಯುತ್ತಿದ್ದು, ಅದಕ್ಕೆ ಪೂರಕ ಎನ್ನುವಂತೆ ಸ್ವತ್ಛತೆಯಲ್ಲೂ ಹಿಂದುಳಿದ ಸ್ಥಾನ ಕಾಯಂ ಎನಿಸಿದೆ.
ಸ್ವಚ್ಛತೆ ಮಾಯ: ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲವೊಂದು ರಸ್ತೆ ಬದಿ ಇಂದಿಗೂ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದರ ವಿಲೇವಾರಿ ಮಾಡುತ್ತಿಲ್ಲ. ನಗರಸಭೆ ವಾಹನಗಳು ಕೆಲವೊಂದು ಬಡಾವಣೆಗಳಲ್ಲಿ ಸಂಚರಿಸುತ್ತಿದ್ದು, ಕೊಳಚೆ ಪ್ರದೇಶಗಳತ್ತ ಮುಖ ಮಾಡುವುದಿಲ್ಲ ಎಂಬ ಆರೋಪಗಳಿವೆ. ಇನ್ನು ರಾಜಕಾಲುವೆಗಳು, ಚರಂಡಿಗಳು ತ್ಯಾಜ್ಯದಿಂದ ತುಂಬಿ ಹೋಗಿದ್ದು, ಕೊಂಚ ಮಳೆ ಬಂದರೂ ತಗ್ಗು ಪ್ರದೇಶಗಳಿಗೆ ಚರಂಡಿ ನೀರು ನುಗ್ಗುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿ ಬಗ್ಗೆ ನಗರಸಭೆ ಜಾಗೃತಿ ಮೂಡಿಸಿದರೂ, ಜನ ಮಾತ್ರೆ ಎಚ್ಚೆತ್ತುಕೊಂಡಿಲ್ಲ. ಬೇಕಾಬಿಟ್ಟಿಯಾಗಿ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಮಳೆ ಬಂದರೆ ಸಾಕು ಕೆಲವೊಂದು ರಸ್ತೆಗಳು ದುರ್ನಾತ ಬೀರುವಂತಿರುತ್ತವೆ.
ಸದಸ್ಯರಿಗಿಲ್ಲ ಅಧಿಕಾರ: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ವರ್ಷ ಸಮೀಪಿಸಿದರೂ ಈವರೆಗೆ ಸದಸ್ಯರಿಗೆ ಅಧಿಕಾರ ಸಿಕ್ಕಿಲ್ಲ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಈವರೆಗೂ ಆಡಳಿತ ಮಂಡಳಿ ರಚನೆಗೆ ನ್ಯಾಯಾಲಯ ನೀಡಿದ ತಡೆಯಾಜ್ಞೆ ತೆರವಾಗಿಲ್ಲ. ಇದರಿಂದ ಚುನಾಯಿತ ಸದಸ್ಯರು ಅಭಿವೃದ್ಧಿ, ಸ್ವತ್ಛತೆ ವಿಚಾರ ಬಂದರೆ ಕೈ ಚೆಲ್ಲುತ್ತಿದ್ದಾರೆ. ನಮ್ಮನ್ನೇನು ಕೇಳಬೇಡಿ. ನಮಗಿನ್ನೂ ಅಧಿಕಾರವೇ ಸಿಕ್ಕಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದ್ದು, ನಗರ ಸ್ವಚ್ಛತೆ ವಿಚಾರದಲ್ಲೂ ಹಿಂದುಳಿಯಲು ಕಾರಣವಾಗುತ್ತಿದೆ.
ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಫಲಿತಾಂಶ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಕೋವಿಡ್-19 ಇರುವ ಕಾರಣ ನಗರಸಭೆ ಬಹುತೇಕ ಸಿಬ್ಬಂದಿಯನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೂ ಇರುವ ಸಿಬ್ಬಂದಿಯಿಂದ ನಗರ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ನಿತ್ಯ ಬೆಳಗ್ಗೆ ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದು, ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು.-
ಡಾ| ದೇವಾನಂದ ದೊಡ್ಡಮನಿ, ನಗರಸಭೆ ಪೌರಾಯುಕ್ತ