ಶಿರ್ವ: ಇಲ್ಲಿನ ಗ್ರಾಮ ಪಂಚಾಯತ್ ವಠಾರ ಹಾಗೂ ಬಸ್ಸು ನಿಲ್ದಾಣದ ಸುತ್ತ ಮುತ್ತ ಮಧು,ಗುಟ್ಕಾ ಮತ್ತಿತರ ತಂಬಾಕು ಪದಾಥìಗಳನ್ನು ತಿಂದು ಸಾರ್ವಜನಿಕವಾಗಿ ಉಗುಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ದೃಶ್ಯ ಪರಿಸರದಲ್ಲಿ ಸಾಮಾನ್ಯವಾಗಿದ್ದು ಸಮಸ್ಯೆಯಾಗಿದೆ.
ಸ್ವ ಚ್ಛ ಸಂದೇಶ:
ಈ ಸಂಬಂಧ ಜನಜಾಗೃತಿಗಾಗಿ ಸ್ವಚ್ಛ ಶಿರ್ವ-ನಮ್ಮ ಶಿರ್ವ ಕಾರ್ಯಕ್ರಮದಡಿ ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿಗಳೊಂದಿಗೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿ ಪರಿಸರ ಹಾಳು ಮಾಡುತ್ತಿರುವವರಿಗೆ ದಂಡ ವಿಧಿಸುವ ಮೂಲಕ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಸಾರ್ವಜನಿಕರಿಗೆ ಸ್ವಚ್ಛತೆಯ ಸಂದೇಶ ನೀಡುತ್ತಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರು ಮತ್ತು ಕಸ ಹಾಕುವವರ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಮತ್ತು ನಿಯಂತ್ರಣ ಕಾಯ್ದೆಯಡಿ ದಂಡ ವಿಧಿಸಿ ಎಚ್ಚರಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್‌ಅವರೊಂದಿಗೆ ಗ್ರಾ.ಪಂ.ಪಂ. ಸಿಬಂದಿಗಳಾದ ಪ್ರವೀಣ್,ಕಿಶೋರ್,ರಕ್ಷಿತ್ ಮತ್ತು ಅಮೃತಾ ಭಾಗವಹಿಸಿ ಸಹಕಾರ ನೀಡುತ್ತಿದ್ದಾರೆ.
ವಾಟ್ಸಪ್ ಮೂಲಕ ಸಾರ್ವಜನಿಕ ಸ್ಥಳ,ರಸ್ತೆ ಬದಿ,ಬಸ್ಸು ತಂಗುದಾಣ,ಶಾಲೆ ಹಾಗೂ ಅಂಗನವಾಡಿ ಪರಿಸರದಲ್ಲಿ ಕಸ ತ್ಯಾಜ್ಯ ಕಂಡುಬಂದಲ್ಲಿ ಗ್ರಾ.ಪಂ.ಗೆ ಪೋಟೋ ಸಹಿತ ಮಾಹಿತಿ ನೀಡಲು ಕೋರಲಾಗಿದ್ದು ಗ್ರಾ.ಪಂ. ವ್ಯಾಪ್ತಿಯ ಕಸದ ರಾಶಿ ವಿಲೇವಾರಿಯನ್ನೂ ಮಾಡಲಾಗುತ್ತಿದೆ.
ಜಾಲತಾಣಗಳಲ್ಲಿ ವೈರಲ್:
ಸಾರ್ವಜನಿಕ ಸ್ಥಳಗಳಲ್ಲಿ ಕಸ, ತ್ಯಾಜ್ಯ ಬಿಸಾಡುವವರನ್ನು ಗುರುತಿಸಿ ಹಿಡಿದು ದಂಡ ವಿಧಿಸಲಾಗುವ ಮತ್ತು ಸಾರ್ವಜನಿಕವಾಗಿ ಉಗುಳುವವರು ಕಂಡುಬಂದಲ್ಲಿ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾಯ್ದೆಯಡಿ ದಂಡ ವಿಧಿಸಿದ ರಶೀದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆಹಾ ಈ ತರಹದ ಶಿಕ್ಷೆ/ದಂಡ ಎಲ್ಲಾ ಕಡೆ ಬಂದರೆ ಸ್ವರ್ಗಕ್ಕೆ ಮೂರೇ ಗೇಣು!!! ಇದು ಸಮಾಜದ ಎಲ್ಲರಿಗೂ ಅನ್ವಯಿಸುವ ಹಾಗಾದರೆ ಒಳಿತು ಎಂದು ಗ್ರಾ.ಪಂ.ನ ಕಾರ್ಯದ ಬಗ್ಗೆ ವ್ಯಾಪಕ ಪ್ರಶಂಸೆಯೊಂದಿಗೆ, ಜನರಿಗೆ ತಿದ್ದಿಕೊಳ್ಳುವ ಮನಸ್ಸೇ ಇಲ್ಲವಲ್ಲಾ ಎನ್ನುವ ಬೇಸರವೂ ವ್ಯಕ್ತವಾಗಿದೆ.
ಸ್ವಚ್ಛ ಗ್ರಾಮದ ಪ್ರಯತ್ನ: ಪರಿಸರ ಸ್ವಚ್ಛತೆಯ ಕಾಳಜಿಯಿಂದ ನಮ್ಮ ಪಾಲಿನ ಕಿಂಚಿತ್ ಪ್ರಯತ್ನ ನಡೆಸುತ್ತಿದ್ದೇವೆ. ಸಾರ್ವಜನಿಕರು, ಗ್ರಾಮಸ್ಥರು,ಸಂಘಸಂಸ್ಥೆಗಳು ಕಸ,ತ್ಯಾಜ್ಯ ಮುಕ್ತ ಸ್ವಚ್ಛ ಗ್ರಾಮ ಮಾಡುವಲ್ಲಿ ಗ್ರಾ.ಪಂ. ನೊಂದಿಗೆ ಸಹಕರಿಸಿ ಕೈಜೋಡಿಸಿದಾಗ ಸ್ವಚ್ಛ,ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. –
ಕೆ.ಆರ್. ಪಾಟ್ಕರ್, ಶಿರ್ವ ಗಾ.ಪಂ. ಅಧ್ಯಕ್ಷ.