Advertisement

ಸಂಚಾರಿ ಸ್ವ್ಯಾಬ್ ಲ್ಯಾಬ್-ಫೀವರ್ ಕ್ಲಿನಿಕ್ ಬಸ್ ಸಿದ್ಧ

08:18 AM Jun 12, 2020 | Suhan S |

ಬಳ್ಳಾರಿ: ಜಿಲ್ಲಾಡಳಿತ ಹಾಗೂ ಎನ್‌ಇಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷವಾಗಿ ವಿನ್ಯಾಸ ಮಾಡಿದ ಸಂಚಾರಿ ಸ್ವ್ಯಾಬ್‌ ಲ್ಯಾಬ್‌ ಹಾಗೂ ಫೀವರ್‌ ಕ್ಲಿನಿಕ್‌ ಬಸ್‌ ಸಿದ್ಧಪಡಿಸಲಾಗಿದ್ದು, ಈ ಸಂಚಾರಿ ಬಸ್‌ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿರುವ ಕಡೆ ಸಂಚರಿಸಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಲಿದೆ ಹಾಗೂ ಫೀವರ್‌ ಕೂಡ ತಪಾಸಣೆ ಮಾಡಲಿದೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಸಂಚಾರಿ ಸ್ಚ್ಯಾಬ್‌ ಲ್ಯಾಬ್‌ ಹಾಗೂ ಫೀವರ್‌ ಕ್ಲಿನಿಕ್‌ ಬಸ್‌ನ್ನು ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌, ಜಿಪಂ ಸಿಇಒ ಕೆ.ನಿತೀಶ್‌ ಹಾಗೂ ಎನ್‌ಇಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿ ಕಾರಿ ಚಂದ್ರಶೇಖರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.  ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹಾಗೂ ಜಿಪಂ ಸಿಇಒ ಕೆ.ನಿತೀಶ್‌ ಅವರು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ದೇಶದಲ್ಲಿ ಕೋವಿಡ್ ಕೇಸ್‌ ಗಳು ದಿನೇ-ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿ ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಸೋಂಕು ಪರೀಕ್ಷಿಸಲು ಜಿಲ್ಲಾಡಳಿತ ಮತ್ತು ಕೆಎಸ್‌ಆರ್‌ಟಿಸಿ ಘಟಕದ ವತಿಯಿಂದ ಸಂಚಾರಿ ಸ್ವ್ಯಾಬ್‌ ಲ್ಯಾಬ್‌ ಹಾಗೂ ಫೀವರ್‌ ಕ್ಲಿನಿಕ್‌ ಬಸ್‌ ವ್ಯವಸ್ಥೆ ಮಾಡಲಾಗಿದೆ. ಈ ವಾಹನವು ಮೊದಲಿಗೆ ಜಿಂದಾಲ್‌ ಗೆ ಸಂಚರಿಸಲಿದೆ. ಇದಾದ ನಂತರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದ್ದು, ವಾಹನದಲ್ಲಿ ಒಬ್ಬ ವೈದ್ಯ, ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಸಹಾಯಕ ಸಿಬ್ಬಂದಿಗಳನ್ನು ಹೊಂದಿರುತ್ತದೆ. ಶಂಕಿತರು ಮತ್ತು ಸೋಂಕಿತರು ಇರುವ ಸ್ಥಳದಲ್ಲಿಯೇ ಹೋಗಿ ತಪಾಸಣೆ ನಡೆಸಿ ವರದಿಯನ್ನು 24 ಗಂಟೆಗಳಲ್ಲಿ ನೀಡಲಾಗುತ್ತದೆ ಎಂದು ವಿವರಿಸಿದರು. ಈ ವೇಳೆ ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ದಾಸಪ್ಪನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next