ಪಡುಬಿದ್ರಿ 7: ಸುಜ್ಲಾನ್ ಸಂಸ್ಥೆ ಹಾಗೂ ಕಾರ್ಮಿಕ ಮುಖಂಡರು ಪರಸ್ಪರ ಒಪ್ಪಂದ ಪತ್ರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಹಲವು ದಿನಗಳ ಕಾರ್ಮಿಕ ಮತ್ತು ಆಡಳಿತ ವರ್ಗದ ಸಂಘರ್ಷಕ್ಕೆ ಅಂತ್ಯ ಹಾಡಲಾಗಿದೆ ಎಂದು ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.
ಅವರು ಡಿ. 7ರಂದು ಸುಜ್ಲಾನ್ ಕಾರ್ಪೊರೇಟ್ ಮುಖ್ಯಸ್ಥ ವಿಜಯ್ ಅಸ್ನಾನಿ ಅವರೊಂದಿಗೆ ನಡೆದ ಸೌಹಾರ್ದಯುತ ಮಾತುಕತೆಯ ಬಳಿಕ ಕಾರ್ಮಿಕರ ಒಪ್ಪಂದ ಪತ್ರ ವಿನಿಮಯ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಮಾತನಾಡಿ, ಕಾರ್ಮಿಕರ ನ್ಯಾಯಬದ್ಧ ಬೇಡಿಕೆಗಳನ್ನು ಸುಜ್ಲಾನ್ ಕಂಪೆನಿಯು ಒಪ್ಪಿದೆ. ಆಡಳಿತ ವರ್ಗವು ಕಾರ್ಮಿಕರು ಉತ್ತಮ ರೀತಿಯಲ್ಲಿ ಕಂಪೆನಿ ಉತ್ಪಾದನೆಯಲ್ಲಿ ತೊಡಗಿಕೊಳ್ಳಬೇಕೆಂದಿದೆ. ವಿವಾದವು ಸುಖಾಂತ್ಯ ಕಂಡಿದೆ ಎಂದರು.
ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ದ.ಕ., ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ ಶೆಟ್ಟಿ ಮಾತನಾಡಿದರು. ರಾಜ್ಯ ಇಂಟಕ್ ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ.ಕೆ., ಜತೆ ಕಾರ್ಯದರ್ಶಿ ಅಬೂಬಕರ್, ಡಿ. ಆರ್. ನಾರಾಯಣ್, ಸ್ಟೀವನ್ ಮತ್ತಿತರಿದ್ದರು.
ಕಾರ್ಮಿಕರ ಗೆಲುವು
ಇಂಟಕ್ ಸಂಸ್ಥೆಗೆ ಹಾಗೂ ಸುಜ್ಲಾನ್ ಕಾರ್ಮಿಕರಿಗೆ ಸಂದ ಗೆಲುವು ಇದಾಗಿದೆ. ಇಂದು ಸುಮಾರು 269 ಕಾರ್ಮಿಕರು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಮಿಕ್ಕುಳಿದ 57 ಮಂದಿ ಹೊರ ರಾಜ್ಯಗಳಿಗೆ ತೆರಳಿದ್ದು ಮರಳಿ ಸೇರಿಕೊಳ್ಳಲು ಒಂದು ವಾರದ ಅವಕಾಶ ಕಲ್ಪಿಸಲಾಗಿದೆ. ಲಾಕೌಟ್ ನ. 29ರಿಂದಲೇ ತೆರವಾ ಗಿದ್ದು, ಕಾರ್ಮಿಕರು ಉತ್ಪಾದನೆ ಕಾರ್ಯಗಳಲ್ಲಿ
ಸಹಕರಿಸುವರು. ಕಾರ್ಮಿಕರ ವೇತನದಲ್ಲಿ ಯಾವುದೇ ಕಡಿತವಿರುವುದಿಲ್ಲ.
– ರಾಕೇಶ್ ಮಲ್ಲಿ