ನವದೆಹಲಿ: ಭಾರತದ ಮೋಟಾರು ವಾಹನ ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವಾಹನ(ಎಸ್‌ಯುವಿ)ಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಐದೇ ವರ್ಷಗಳಲ್ಲಿ 36 ಎಸ್‌ಯುವಿಗಳು ದೇಶದಲ್ಲಿ ಬಿಡುಗಡೆಯಾಗಿದ್ದು, ಅದರಲ್ಲಿ ಕೆಲವು ಕಾರುಗಳ ನಿರೀಕ್ಷಣಾ ಸಮಯ ಎರಡು ವರ್ಷಕ್ಕೂ ಹೆಚ್ಚಿದೆ!
“ಕಳೆದ ಕೆಲವು ವರ್ಷಗಳ ಹಿಂದೆ ಒಟ್ಟಾರೆ ಕಾರುಗಳ ಮಾರುಕಟ್ಟೆಯಲ್ಲಿ ಶೇ.19 ಪಾಲು ಎಸ್‌ಯುವಿಯದ್ದಾಗಿತ್ತು. ಆದರೆ 2021-22ರಲ್ಲಿ ಅದರ ಪಾಲು ಶೇ.40ಕ್ಕೆ ಏರಿದೆ. ಅದರಲ್ಲೂ ಟಾಪ್ ಎಂಡ್ ವಾಹನಗಳಿಗೆ ಬೇಡಿಕೆ ಹೆಚ್ಚಿದೆ.
ಜನರು ಇರುವುದರಲ್ಲಿ ಬೆಸ್ಟ್ ಬೇಕೆಂದು ಹುಡುಕಲಾರಂಭಿಸಿದ್ದಾರೆ. ಎಸ್‌ಯುವಿ ಬುಕ್ ಮಾಡುವ ಶೇ.70 ಮಂದಿ ಟಾಪ್ ಎಂಡ್ ಕಾರನ್ನೇ ಬುಕ್ ಮಾಡುತ್ತಿದ್ದಾರೆ’ ಎನ್ನುತ್ತಾರೆ ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್.
ಈ ಬಗ್ಗೆ ಕಿಯಾ ಸಂಸ್ಥೆಯ ಅಧಿಕಾರಿ ಮ್ಯುಂಗ್ ಸಿಂಗ್ ಸೋನ್ ಕೂಡ ಮಾತನಾಡಿದ್ದು, “ಕಾರೆನ್ಸ್ ಎಸ್‌ಯುವಿ ಬಿಡುಗಡೆ ಮಾಡಿದ ಐದೇ ತಿಂಗಳಲ್ಲಿ 30,000ಕ್ಕೂ ಅಧಿಕ ಕಾರು ಮಾರಾಟವಾಗಿದೆ. ಅದರಲ್ಲೂ ಬಹುಪಾಲು ಟಾಪ್ ಎಂಡ್ ಕಾರನ್ನೇ ಜನರು ಕೊಂಡಿದ್ದಾರೆ’ ಎಂದಿದ್ದಾರೆ.