ಬೆಂಗಳೂರು: ನಗರದಲ್ಲಿನ ಪೌರಕಾರ್ಮಿಕರಿಗೆ ಶೌಚಾಲಯದ ಸಮಸ್ಯೆ ಹಾಗೂ ವಿಶ್ರಾಂತಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಗರದ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ “ಸುವಿಧಾ ಕ್ಯಾಬಿನ್’ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಹಾಗೂ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸೋಮ ವಾರ ಚಾಲನೆ ನೀಡಿದರು.
ನಗರದಲ್ಲಿನ ಪೌರಕಾರ್ಮಿಕರಿಕಗೆ ಕೆಲವು ವಾರ್ಡ್‌ಗಳಲ್ಲಿ ಶೌಚಾಲಯದ ವ್ಯವಸ್ಥೆಯೂ ಇಲ್ಲದೆ, ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಿದ್ದು, ಇದರ ಪರಿಣಾಮ ಪೌರಕಾರ್ಮಿಕರಿಗೆ ಮೂತ್ರಪಿಂಡ ಹಾಗೂ ಗರ್ಭಕೋಶಕ್ಕೆ ಸಂಬಂಧಿಸಿದ ರೋಗಗಳಿಗೆ ತುತ್ತಾಗುತ್ತಿರುವುದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸುವಿಧಾ ಕ್ಯಾಬಿನ್ ಸ್ಥಾಪಿಸಲಾಗಿದೆ. ಮೇಯರ್ ಎಂ.ಗೌತಮ್‌ಕುಮಾರ್ ಮಾತನಾಡಿದರು.
ನಗರವನ್ನು ಸ್ವತ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಬಿಬಿಎಂಪಿಯಿಂದ ವಿನೂತನವಾಗಿ “ಸುವಿಧಾ ಕ್ಯಾಬಿನ್’ ಯೋಜನೆ ಪರಿಚಯಿಸಲಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ, ಮಲ್ಲೇಶ್ವರ ವಾರ್ಡ್‌ನಲ್ಲಿ ಸುವಿಧ ಕ್ಯಾಬಿನ್‌ಗೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಜಕ್ಕೂರು ವಾಡ್‌ನಲ್ಲಿಯೂ ಆರಂಭಿಸಲಾಗುವುದು. ಈ ಭಾಗಗಳಲ್ಲಿ ಯಶಸ್ವಿಯಾದರೆ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೂ ಈ ಕೇಂದ್ರವನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಮಾತನಾಡಿ, ಪ್ರತಿ ಸುವಿಧಾ ಕ್ಯಾಬಿನ್‌ಗೆ 5.5 ಲಕ್ಷ ರೂ. ವೆಚ್ಚವಾಗಲಿದ್ದು, ನಗರದ 75 ಕಡೆಗಳಲ್ಲಿ ಸುವಿಧಾ ಕ್ಯಾಬಿಲ್ ಅಳವಡಿಸುವುದಕ್ಕೆ ಸ್ಥಳ ಗುರುತು ಮಾಡಲಾಗಿದೆ. ಈ ಬಗ್ಗೆ ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು, ಪಾಲಿಕೆ ಸದಸ್ಯ ಎನ್. ಜಯಪಾಲ, ಆಯುಕ್ತ ಬಿ.ಹೆಚ್.ಅನಿಲ್‌ಕುಮಾರ್, ಜಂಟಿ ಆಯುಕ್ತ ಸಫರಾಜ್ ಖಾನ್, ಅಧೀಕ್ಷಕ ಎಂಜಿನಿಯರ್ ಬಸವರಾಜ್ ಕಬಾಡೆ, ಮುಖ್ಯ ಎಂಜಿನಿಯರ್ ವಿಶ್ವನಾಥ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಸುವಿಧಾ ಕ್ಯಾಬಿನ್‌ನ ಉಪಯೋಗಗಳು: ಸುವಿಧಾ ಕ್ಯಾಬಿನ್‌ಅನ್ನು ಮುಖ್ಯವಾಗಿ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ನಿರ್ಮಿಸಲಾಗಿದೆ. ಮುಖ್ಯವಾಗಿ ವಾರ್ಡ್‌ಗಳ ಮಸ್ಟರಿಂಗ್ ಕೇಂದ್ರಗಳ ಬಳಿ ಕಂಟೈನರ್‌ನಿಂದ ಕ್ಯಾಬಿನ್ ನಿರ್ಮಿಸಲಾಗಿದ್ದು, ಸುವಿಧಾ ಎಂದು ನಾಮಕರಣ ಮಾಡಲಾಗಿದೆ.
ಇದರಲ್ಲಿ ಪೌರಕಾರ್ಮಿಕರು ಬಟ್ಟೆ ಬದಲಾಯಿಸುವುದಕ್ಕೆ ಕೊಠಡಿ, ಮಹಿಳಾ ಪೌರಕಾರ್ಮಿಕರು ಮಗುವಿಗೆ ಹಾಲುಣಿಸಲು ಸ್ಥಳಾವಕಾಶ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಇಡುವುದಕ್ಕೆ ಕಪಾಟು, ಮೊಬೈಲ್ ಚಾರ್ಚಿಂಗ್ ಪಾಯಿಂಟ್, ಫ್ಯಾನ್, ನೀರಿನ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಪೌರಕಾರ್ಮಿಕರಿಗೆ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.