Advertisement

ಸುವರ್ಣ ಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ಕಾರ್ಯಾರಂಭ

02:59 PM Jun 19, 2020 | keerthan |

ಬೆಳಗಾವಿ: ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಮತ್ತು ಸರ್ಕಾರದ ಆಶಯದಂತೆ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠವು ಈಗ ಕಾರ್ಯಾರಂಭಿಸಿದೆ.

Advertisement

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಗೀತಾ ಬಿ.ವಿ. ಅವರು, ಆಯೋಗದ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂ.22 ರಿಂದ ಆರಂಭಗೊಳ್ಳಲಿದೆ ಎಂದರು.

ಆಯೋಗದ ಬೆಳಗಾವಿ ಪೀಠವು ಮಾರ್ಚ್ 3 ರಂದು ಕಾರ್ಯಾರಂಭಿಸಬೇಕಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ವಿಳಂಬವಾಯಿತು. ಸರ್ಕಾರ ಮತ್ತು ಉತ್ತರ ಕರ್ನಾಟಕದ ಜನರ ಆಶೋತ್ತರದಂತೆ ಸುವರ್ಣ ವಿಧಾನ ಸೌಧದಲ್ಲಿ ಕಾರ್ಯ ಕಲಾಪ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಮಾಹಿತಿ ಆಯೋಗದ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳು ಬರಲಿದ್ದು, ಪೀಠದ ವ್ಯಾಪ್ತಿಯಲ್ಲಿ ಒಟ್ಟಾರೆ ನಾಲ್ಕು ಸಾವಿರ ಪ್ರಕರಣಗಳು ಬಾಕಿ ಉಳಿದಿವೆ ಎಂದು ಆಯುಕ್ತರಾದ ಗೀತಾ ಬಿ‌.ವಿ. ತಿಳಿಸಿದರು.

ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳನ್ನು ಪೀಠ ನಿರ್ವಹಿಸಲಿದೆ. ನಾಲ್ಕು ಸಾವಿರ ಪ್ರಕರಣಗಳು ಇರುವುದರಿಂದ ಕೊರೊನಾ ಹಿನ್ನೆಲೆಯಲ್ಲಿ ಆರಂಭದಲ್ಲಿ ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ಕೈಗೆತ್ತಿಕೊಂಡು ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

Advertisement

ಅಧಿವೇಶನ ಸಂದರ್ಭದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠದ ಕಾರ್ಯಕಲಾಪಗಳು ನಡೆಯುವುದಿಲ್ಲ. ಈ ಅವಧಿಯಲ್ಲಿ ಪೀಠದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಾಗಾರ ಆಯೋಜಿಸಲಾವುದು. ಕಾಯ್ದೆಯ ಬಗ್ಗೆ ಸಮರ್ಪಕ ತಿಳಿವಳಿಕೆ ನೀಡಲು ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.

ಅದೇ ರೀತಿ ಅಧಿವೇಶನ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕಲಾಪ ನಡೆಸಲಾಗುವುದು. ಇದಕ್ಕೂ ಮುನ್ನ ಬೆಂಗಳೂರಿನಿಂದ ವಿಡಿಯೋ ಸಂವಾದದ ಮೂಲಕ ಪ್ರಕರಣ ವಿಲೇವಾರಿ ಮಾಡಲಾಗಿದೆ. ಪೀಠದ ಕಾರ್ಯಕಲಾಪಗಳ ಸುಮಗ ನಿರ್ವಹಣೆಗೆ ಶಾಖಾಧಿಕಾರಿ ಹಾಗೂ ಅಧೀನ ಕಾರ್ಯದರ್ಶಿಗಳ ಅಗತ್ಯವಿದ್ದು, ಇವರನ್ನು ನಿಯೋಜಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next