Advertisement

ಮೇಳಾವ್‌ದಲ್ಲಿ ಮತ್ತೆ “ಮಹಾ’ನಾಯಕರ ಪುಂಡಾಟ!

06:25 AM Nov 14, 2017 | |

ಬೆಳಗಾವಿ: ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಿಸದಂತೆ ಜಿಲ್ಲಾಡಳಿತ ಹೊರಡಿಸಿದ್ದ ಆದೇಶ ಉಲ್ಲಂಘಿಸಿ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಮಹಾರಾಷ್ಟ್ರದ ಇಬ್ಬರು ಎನ್‌ಸಿಪಿ ಶಾಸಕರು, ಸಂಸದ ಹಾಗೂ ಓರ್ವ ಮಾಜಿ ಶಾಸಕ ಮರಾಠಿ ಮೇಳಾವದಲ್ಲಿ ಪಾಲ್ಗೊಂಡು ಕರ್ನಾಟಕ ಸರ್ಕಾರದ ವಿರುದ್ಧ ಭಾಷಣ ಮಾಡಿ ವಾಪಸ್‌ ಹೋದರು!

Advertisement

ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ವಿರೋಧಿಸಿ ಪ್ರತಿ ವರ್ಷ ಮಹಾರಾಷ್ಟ್ರ ಏಕೀಕರಣ ಸಮಿತಿ ಹಮ್ಮಿಕೊಳ್ಳುವ ಮೇಳಾವದಲ್ಲಿ ಮಹಾ ನಾಯಕರು ಪಾಲ್ಗೊಳ್ಳಬಾರದು. ಗಡಿ ದಾಟಿ ಬೆಳಗಾವಿ ಪ್ರವೇಶಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್‌. ಹೊರಡಿಸಿದ್ದ ಆದೇಶಕ್ಕೆ ಕಿಮ್ಮತ್ತು ನೀಡದೇ ಮಹಾ ನಾಯಕರು ಗಡಿ ದಾಟಿ ಬಂದರೂ ಪೊಲೀಸರು ಗಪ್‌ಚುಪ್‌ ಆಗಿದ್ದರು.

ಬೆಳಗಾವಿ ಗಡಿ ಭಾಗದಲ್ಲಿ ಕರ್ನಾಟಕ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಿ ಬಂದೋಬಸ್ತ್ ಮಾಡಿದ್ದರೂ ಕಣ್ಣು ತಪ್ಪಿಸಿ
ಮಹಾರಾಷ್ಟ್ರ ನಾಯಕರಾದ ಮಾಜಿ ಸಚಿವ ಜಯಂತ ಪಾಟೀಲ, ಸಂಸದ ಧನಂಜಯ ಮಹಾಡಿಕ್‌, ಚಂದಗಡ
ಶಾಸಕಿ ಸಂಧ್ಯಾದೇವಿ ಕುಪ್ಪೇಕರ, ಕೆ.ಪಿ. ಪಾಟೀಲ ಬಂದು ಮೇಳಾವ್‌ದಲ್ಲಿ ಭಾಗವಹಿಸುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಕೊಗನೊಳ್ಳಿ ಚೆಕ್‌ ಪೋಸ್ಟ್‌, ಕಣಕುಂಬಿ, ಬಾಚಿ ಚೆಕ್‌ ಪೋಸ್ಟ್‌, ನಿಪ್ಪಾಣಿ, ಗಡಹಿಂಗ್ಲಜ ಹಾಗೂ ಚಂದಗಡ ತಾಲೂಕಿನ ಗಡಿ ಪ್ರದೇಶದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು. ಆದರೆ ಪೊಲೀಸರ ಕಣ್ಣು ತಪ್ಪಿಸಿ ಧನಂಜಯ ಮಹಾಡಿಕ ಕರ್ನಾಟಕ ನೋಂದಣಿಯ ಕಾರಿನಲ್ಲಿ ಬೆಳಗಾವಿಗೆ ಬಂದರು. ಬುದರಗಡ ಮಾಜಿ ಶಾಸಕ ಕೆ.ಪಿ. ಪಾಟೀಲ ಬೈಕ್‌ ಮೇಲೆ ಬಂದು ಮೇಳಾವದಲ್ಲಿ ಪಾಲ್ಗೊಂಡರು. ಮಾಜಿ ಸಚಿವ, ಎನ್‌ಸಿಪಿ ಶಾಸಕ ಜಯಂತ ಪಾಟೀಲ ತಮ್ಮ ಕುರ್ತಾ, ಪೈಜಾಮಾ ಬದಲಿಸಿ ಪ್ಯಾಂಟ್‌ ಹಾಗೂ ಅಂಗಿ ಧರಿಸಿ ಸಾಮಾನ್ಯರಂತೆ ವಾಹನದಲ್ಲಿ ಬಂದರು. ಅಷ್ಟಲ್ಲದೇ ಕಣ್ತಪ್ಪಿಸಿ ಬಂದಿದ್ದನ್ನು ಸಾಹಸ ಎಂಬಂತೆ ಬಿಂಬಿಸಿಕೊಂಡರು.

ಮೂಕ ಪ್ರೇಕ್ಷಕರಾದ ಪೊಲೀಸರು: ಮಹಾ ನಾಯಕರು ಗಡಿ ಪ್ರವೇಶಿಸದಂತೆ ಆದೇಶ ಹೊರಡಿಸಿದ್ದು ಎಳ್ಳಷ್ಟೂ 
ಪಾಲನೆಯಾಗಲಿಲ್ಲ. ವೇದಿಕೆ ಏರಿ ಬಂದ ಮುಖಂಡರು ಭಾಷಣ ಮಾಡಿದರು. ನಮಗೆ ಕೈ ಹಚ್ಚಲೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದರೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಮಹಾನಗರ ಪಾಲಿಕೆ ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ಮೇಳಾವ್‌ ನಡೆಸಲು ಅನುಮತಿ ನೀಡದೇ ಇರುವುದರಿಂದ ಎಂಇಎಸ್‌ ನಾಯಕರು ಅಲ್ಲಿಯೇ ಪಕ್ಕದಲ್ಲಿದ್ದ ರಸ್ತೆ ಮೇಲೆ ಪೆಂಡಾಲ್‌ ಹಾಕಿ ಮೇಳಾವ್‌ ನಡೆಸಿದರು.

Advertisement

ಸುವರ್ಣ ವಿಧಾನಸೌಧದಲ್ಲೇ
ಪ್ರಥಮ ಅಧಿವೇಶನ

ಮಹಾರಾಷ್ಟ್ರ ಸರ್ಕಾರ ಮುಂಬೈ ಹಾಗೂ ನಾಗಪುರದಲ್ಲಿ ಅಧಿವೇಶನ ನಡೆಸುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಬಂದರೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮೊದಲ ಅಧಿವೇಶನ ನಡೆಸಲಾಗುವುದು. ಕರ್ನಾಟಕ ಸರ್ಕಾರ ಇಲ್ಲಿ ಸೌಧ ಕಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ. ಆದರೆ ಮರಾಠಿ ಭಾಷಿಕರ ಬೇಡಿಕೆ ಕಡೆಗಣಿಸಿ ಬೆಳಗಾವಿಯನ್ನು ಉಪರಾಜಧಾನಿ ಮಾಡಲಾಗಿದೆ ಎಂದು ಶಾಸಕ ಜಯಂತ ಪಾಟೀಲ ಹೇಳಿದರು.

ಅಧಿವೇಶನ ಬಿಟ್ಟು ಮೇಳಾವಕ್ಕೆ
ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್‌ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ ಹಾಗೂ ಖಾನಾಪುರ ಶಾಸಕ ಅರವಿಂದ ಪಾಟೀಲ ಅಧಿವೇಶನದಲ್ಲಿ ಮರಾಠಿ ಮಾತನಾಡಲು ಬಿಡಲಿಲ್ಲ ಎಂಬ ನೆಪ ಹೇಳಿ ಮಧ್ಯಾಹ್ನ 1:30ರ ಸುಮಾರಿಗೆ ವ್ಯಾಕ್ಸಿನ್‌ ಡಿಪೋದಲ್ಲಿ ನಡೆದ ಮರಾಠಿ ಮೇಳಾವದಲ್ಲಿ ಪಾಲ್ಗೊಂಡರು. ಪ್ರತಿ ವರ್ಷದಂತೆ ಈ ಸಲವೂ ದೂರದಲ್ಲೇ ವಾಹನ ನಿಲ್ಲಿಸಿ ಆಗಮಿಸಿದರು.

– ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next