ನೇಪಿತಾವ್ : ರೊಹಿಂಗ್ಯಾ ಮುಸ್ಲಿಮರ ಬಗೆಗಿನ ತನ್ನ ಮೌನವನ್ನು ದೇಶದ ನಾಯಕಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಆಂಗ್ ಸಾನ್ ಸೂಕಿ ಅವರು ಕೊನೆಗೂ ಮುರಿದಿದ್ದಾರೆ.
ಈಚಿನ ವಾರಗಳಲ್ಲಿ ರಖೈನ್‌ನಲ್ಲಿನ ಸೇನಾ ಹಿಂಸೆಯನ್ನು ತಾಳಲಾರದೆ ನೆರೆಯ ರಾಷ್ಟ್ರಗಳಿಗೆ ನಾಲ್ಕು ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ರಾಷ್ಟ್ರಗಳಿಗೆ ಪಲಾಯನ ಮಾಡಿರುವುದನ್ನು ಪರಿಶೀಲಿಸಲು ಆಂಗ್‌ಸಾನ್ ಸೂಕಿ ಒಪ್ಪಿದ್ದಾರೆ.
“ದೇಶ ಬಿಟ್ಟು ಹೋಗಿರುವ ರೊಹಿಂಗ್ಯಾಗಳ ಮರಳುವಿಕೆ ಪ್ರಕ್ರಿಯೆಯನ್ನು ಪುನರ್ ಪರೀಶೀಲಿಸಲು ಮ್ಯಾನ್‌ಮಾರ್ ಸಿದ್ಧವಿದೆ’ ಎಂದು ದೇಶದ ವಾಸ್ತವದ ನಾಯಕಿ ಆಂಗ್ ಸಾನ್ ಸೂಕಿ ಹೇಳಿದ್ದಾರೆ.
ಮ್ಯಾನ್‌ಮಾರ್‌ನಲ್ಲಿನ ಎಲ್ಲ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿರುವ ಸೂ ಕಿ, “ರೊಹಿಂಗ್ಯಾ ಮುಸ್ಲಿಮರ ಸಾಮೂಹಿಕ ವಲಸೆ ಏಕಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಮ್ಯಾನ್‌ಮಾರ್ ಸಿದ್ಧವಿದೆ. ಅಂತೆಯೇ ದೇಶದಿಂದ ಪಲಾಯನ ಮಾಡಿರುವ ರೊಹಿಂಗ್ಯಾಗಳ ಜತೆಗೆ ಮಾತುಕತೆ ನಡಸಲಾಗುವುದು’ ಎಂದು ಹೇಳಿದ್ದಾರೆ.
“ಲಕ್ಷಗಟ್ಟಲೆ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿರುವ ಬಗ್ಗೆ ನಮಗೆ ತೀವ್ರ ಕಳವಳವಿದೆ. ಮ್ಯಾನ್‌ಮಾರ್ ಸರಕಾರಕ್ಕೆ ತನ್ನ ಹೊಣೆಗಾರಿಕೆಯನ್ನು ನಿರ್ಲಕ್ಷಿಸುವ ಅಥವಾ ಬೇರೆಯವರ ಮೇಲೆ ಗೂಬೆ ಕೂರಿಸುವ ಉದ್ದೇಶವೇನೂ ಇಲ್ಲ. ನಾವು ಎಲ್ಲ ಬಗೆಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮತ್ತು ಕಾನೂನು ಬಾಹಿರ ಹಿಂಸೆಯನ್ನು ಖಂಡಿಸುತ್ತೇವೆ’ ಎಂದು ಸೂಕಿ ಹೇಳಿದರು.