ಮೈಸೂರು: ಸುತ್ತೂರು ಶ್ರೀಕ್ಷೇತ್ರದ ಈ ಪುಣ್ಯಭೂಮಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವ ವಧು-ವರರ ಜೀವನ ಸುಗಮವಾಗಿ ಸಾಗಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾರೈಸಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಮಹತ್ವದ ಕ್ಷಣ. ಸುತ್ತೂರು ಶ್ರೀಕ್ಷೇತ್ರದ ಈ ಪುಣ್ಯಭೂಮಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದೀರಿ, ತಾಯಿ ಚಾಮುಂಡೇಶ್ವರಿ ನಿಮಗೆ ಒಳ್ಳೆಯದು ಮಾಡಲಿ, ಉತ್ತಮ ಜೀವನ ನಿರ್ವಹಣೆಯಾಗಲಿ ಎಂದರು.
ಸುತ್ತೂರು ಮಠಕ್ಕೂ ಎಚ್.ಡಿ.ದೇವೇಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು, ಶ್ರದ್ಧಾ-ಭಕ್ತಿಯಿಂದ ಈ ಕ್ಷೇತ್ರಕ್ಕೆ ಬರುತ್ತಿದ್ದೇವೆ. ನಮಗೆ ಶ್ರೀಕ್ಷೇತ್ರ ದೊಡ್ಡಮಟ್ಟದ ಶಕ್ತಿ ತುಂಬಿದೆ ಎಂದು ಹೇಳಿದರು. ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ದೊಡ್ಡಮಟ್ಟದ ಕೊಡುಗೆ ನೀಡುತ್ತಿರುವ ಸುತ್ತೂರು ಮಠ, ಸರ್ಕಾರ ಮಾಡಲಾಗದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.
ಅದರಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರಕ್ಕೆ ಸರಿಸಾಟಿಯಾಗಿ ಶ್ರೀಮಠ ಸಾಧನೆ ಮಾಡಿದೆ. ಸುತ್ತೂರು ಜಾತ್ರಾ ಮಹೋತ್ಸವದ ಈ ಆರು ದಿನಗಳಲ್ಲಿ ಗ್ರಾಮೀಣ ಸೊಗಡನ್ನು ಪರಿಚಯಿಸುವ ಜೊತೆಗೆ ಕೃಷಿ ಮೇಳ, ವಸ್ತು ಪ್ರದರ್ಶನಗಳ ಮೂಲಕ ಕೃಷಿಕರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಸಮಾಜಕ್ಕೆ ಇಂದು ಈ ರೀತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ಸಮಾಜಕ್ಕೆ ಮಾದರಿಯಾಗಿ ಮಹಿಳೆ ಹೇಗೆ ಇರಬೇಕು ಎಂಬ ಸರಳತೆಯನ್ನು ತೋರಿಸಿಕೊಟ್ಟವರು ಅಮ್ಮನ ಸಮಾನರಾದ ಡಾ.ಸುಧಾಮೂರ್ತಿ ಅವರು, ಹಲವಾರು ಸಮಾಜಸೇವೆಯಲ್ಲಿ ತೊಡಗಿದ್ದಾರೆ, ಅವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸಿದರು.
ಆಶೀರ್ವಚನ ನೀಡಿದ ಉಜ್ಜಯಿನಿ ಶ್ರೀಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಅವರು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸುತ್ತೂರು ಮಠ ಸಾಮಾಜಿಕ ಕ್ರಾಂತಿಯನ್ನೇ ಮಾಡಿದೆ. ಶಿಕ್ಷಣ ರಂಗಕ್ಕಷ್ಟೇ ಮೀಸಲಾಗದೆ ಅನ್ನ, ಅಕ್ಷರ, ಆಶ್ರಯದ ಮೂಲಕ ಸಮಾಜದ ಆಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನಾತನ ಸಂಸ್ಕೃತಿಯಲ್ಲಿನ ಜನನದಿಂದ ಮರಣದವರೆಗಿನ ಅನೇಕ ಸಂಸ್ಕಾರಗಳ ಪೈಕಿ ಗೃಹಸ್ಥಾಶ್ರಮವು ಒಂದು, ಇಂದು ಗೃಹಸ್ಥಾಶ್ರಮ ಪ್ರವೇಶಿಸುತ್ತಿರುವ 184 ಜೋಡಿಗಳು ಉತ್ತಮವಾದ ಬದುಕು ಕಟ್ಟಿಕೊಳ್ಳುವಂತೆ ಹಾರೈಸಿದರು.
ಮದುವೆಗೆ ಲಕ್ಷಾಂತರ ರೂ. ವ್ಯಯಿಸಬೇಕಾಗುತ್ತದೆ. ಅಂಥದರಲ್ಲಿ 184 ಮದುವೆಗಳನ್ನು ಒಟ್ಟಿಗೇ ಮಾಡುವ ಮೂಲಕ ನಾಲ್ಕು ಕೋಟಿಯಷ್ಟು ರಾಷ್ಟ್ರೀಯ ಸಂಪತ್ತನ್ನು ಉಳಿಸಿದ ಕೀರ್ತಿ ಸುತ್ತೂರು ಮಠಕ್ಕೆ ಸಲ್ಲಬೇಕು ಎಂದರು.