ಬಸವಕಲ್ಯಾಣ: ಪರಿಪೂರ್ಣ ಬದುಕಿಗೆ ಉತ್ತಮ ಸಂಸ್ಕಾರ ಅತ್ಯವಶ್ಯವಾಗಿದ್ದು, ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನೂ ನೀಡಲು ಶಿಕ್ಷಕರು ಗಮನ ಹರಿಸಬೇಕು ಎಂದು ಹಿರಿಯ ಸಾಹಿತಿ ಆರ್.ಕೆ. ಹುಡಗಿ ಹೇಳಿದರು.
ನಗರದ ಪ್ರಗತಿ ಎಜ್ಯುಕೇಶನ್ ಟ್ರಸ್ಟ್‌ನ ಕಿಡ್ಸ್ ಕಿಂಗಡಂ ಮತ್ತು ಇರಾ ಪಬ್ಲಿಕ್ ಶಾಲೆಯಲ್ಲಿ ನಡೆದ 4ನೇ ಶಾಲಾ ವಾರ್ಷಿಕ ಸ್ನೇಹಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶರಣರ ಆದರ್ಶ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಎಲ್ಲರಿಂದಲೂ ನಡೆಯಬೇಕು ಎಂದರು.
ನಮ್ಮ ಮಕ್ಕಳು ಇಂಥದ್ದೇ ಕಲಿಯಬೇಕು, ಇಂಥದ್ದೇ ಹುದ್ದೆಗೆ ಏರಬೇಕು ಎನ್ನುವ ಬಗ್ಗೆ ಮಕ್ಕಳ ಮೇಲೆ ಪಾಲಕರು ಮಾನಸಿಕ ಒತ್ತಡ ಹೇರಬಾರದು. ಅವರಲ್ಲಿಯ ಆಸಕ್ತಿ ಗಮನಿಸಿ ಪ್ರೋತ್ಸಾಹಿಸಿದಾಗ ಮಾತ್ರ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯ ಎಂದು ಸಲಹೆ
ನೀಡಿದರು.
ಇಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತವರಣ ನಿರ್ಮಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಚಾರ್ಯ ವಿ.ಎಚ್. ಅಯ್ಯಣ್ಣ, ಡಾ| ಬಿ.ಬಿ.ಪೂಜಾರಿ, ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷೆ ಶೋಭಾ ರಾಣಿ ದಾಬಕೆ ಮಾತನಾಡಿದರು.
ಶಣ್ಮುಖಪ್ಪ ದಾಬಕೆ, ಕಾರ್ಯದರ್ಶಿ ಗೌರೀಶ ದಾಬಕೆ, ಮುಖ್ಯಗುರು ಶ್ರೀನಾಥ, ಶಿಕ್ಷಕಿಯರಾದ ಜಗದೇವಿ ದೆಗಲೂರೆ, ಬಸವೇಶ್ವರಿ ದೆಗಲೂರೆ, ಸಪ್ನಾ ಕೆವಟಿಗೆಯ, ಅಸ್ಮಿತಾ ಹಿಂಬಾರೆ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳಾದ ಸೋಹನ, ಗಗನ, ಸಮೃದ್ಧ ಮತ್ತು ಶ್ರೀನಿಧಿ ಪ್ರಾರ್ಥನೆ ಗೀತೆ ಹಾಡಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷ ಭೂಷಣ ಪ್ರದರ್ಶನ ಮತ್ತು ನಾಟಕ ಪ್ರದರ್ಶಿಸಿದರು.