ಬೆಂಗಳೂರು: ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಸಲುವಾಗಿ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಹೊರತು ಪಡಿಸಿ ಕೆಪಿಸಿಸಿಯನ್ನು ವಿಸರ್ಜಿಸಿರುವ ಕಾಂಗ್ರೆಸ್ ಹೈಕಮಾಂಡ್, ಹೊಸ ಪದಾಧಿಕಾರಿಗಳ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಲು ಹಿಂದೇಟು ಹಾಕುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಜವಾಬ್ದಾರಿಯನ್ನು ಪಕ್ಷದ ಪದಾಧಿಕಾರಿಗಳ ಮೇಲೆ ಹಾಕಿ ಕೆಪಿಸಿಸಿಯನ್ನು ಹೈ ಕಮಾಂಡ್ ಮೂಲಕ ವಿಸರ್ಜಿಸಿ ತಮ್ಮ ಹುದ್ದೆಗಳನ್ನು ಗಟ್ಟಿಗೊಳಿಸಿಕೊಂಡಿರುವ ರಾಜ್ಯ ನಾಯಕರು ಹೊಸದಾಗಿ ಪದಾಧಿಕಾರಿಗಳ ನೇಮಕ ಮಾಡಲಾಗದೇ ಪರದಾಡುವಂತಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮೂಲಕ ಪರ ಮೇಶ್ವರ್ ಅವಧಿಯಲ್ಲಿ ನೇಮಕಗೊಂಡಿದ್ದ ಪದಾಧಿಕಾರಿ ಗಳನ್ನು ವಿಸರ್ಜಿಸಿ ಹೊಸ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ತಾವು ಸಿದ್ಧಪಡಿಸಿರುವ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ನೀಡಿದ್ದಾರೆ ಎನ್ನಲಾಗಿದ್ದು, ರಾಜ್ಯದ ಪಕ್ಷದ ಎಲ್ಲ ನಾಯಕರೊಂದಿಗೆ ಚರ್ಚಿಸದೇ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈಕಮಾಂಡ್ ದಿನೇಶ್ ಗುಂಡೂರಾವ್ ಅವರು ಸಲ್ಲಿಸಿರುವ ಪಟ್ಟಿಗೆ ಒಪ್ಪಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಉಪ ಚುನಾವಣೆ ಮುಗಿವವರೆಗೂ ಅನುಮಾನ: ಈಗಾಗಲೇ ದಿನೇಶ್ ಗುಂಡೂರಾವ್ ಸಲ್ಲಿಸಿರುವ ಪದಾಧಿಕಾರಿ ಗಳ ಪಟ್ಟಿಯ ಬಗ್ಗೆ ರಾಜ್ಯದ ಹಿರಿಯ ನಾಯಕರು ಹೈಕಮಾಂಡ್ ಮುಂದೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಎಲ್ಲ ನಾಯಕರೊಂದಿಗೆ ಚರ್ಚಿಸಿ ಪರಿಷ್ಕೃತ ಪಟ್ಟಿ ಸಿದ್ಧ ಪಡಿ ಸುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಈಗ ರಾಜ್ಯದಲ್ಲಿ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಅದಕ್ಕೂ ಮೊದಲೇ ನಗರ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಪದಾಧಿಕಾರಿಗಳ ನೇಮಕ ಮಾಡುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದಂತಾಗುತ್ತದೆ ಎನ್ನುವ ಅಭಿಪ್ರಾಯ ಇದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಪದಾಧಿಕಾರಿಗಳ ನೇಮಕ ವಿಳಂಬ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಆದರೆ, ಹಾಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವವರೆಗೂ ಹೊಸ ಪದಾಧಿಕಾರಿಗಳ ನೇಮಕ ಮಾಡಬಾರದೆಂದು ವಿರೋಧಿ ಬಣ ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ, ಅವರು ಅಧ್ಯಕ್ಷರಾಗಿದ್ದಾಗಲೇ ನೂತನ ಪದಾಧಿಕಾರಿಗಳ ನೇಮಕಕ್ಕೆ ಅವಕಾಶ ನೀಡಿದರೆ, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಸೂಚಿಸಿದವರಿಗೆ ಮಾತ್ರ ಆದ್ಯತೆ ದೊರೆಯುವ ಸಾಧ್ಯತೆಯಿದೆ. ಹೀಗಾಗಿ ಹೊಸ ಅಧ್ಯಕ್ಷರು ಬರುವವರೆಗೂ ನೂತನ ಪದಾಧಿಕಾರಿಗಳ ನೇಮಕ ಮಾಡದಂತೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಾಜಿಗಳೇ ಹಾಲಿಗಳು: ಕೆಪಿಸಿಸಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಮಾತ್ರ ಉಳಿಸಿಕೊಂಡು ಪದಾಧಿಕಾರಿಗಳನ್ನು ಮಾತ್ರ ವಿಸರ್ಜಿಸಲಾಗಿತ್ತು. ಹಾಜಿ ಷಫಿಉಲ್ಲ, ವೆಂಟಕರಾವ್ ಘೋರ್ಪಡೆ ಹಾಗೂ ಸತ್ಯನ್ ಪುತ್ತೂರ್ ಸೇರಿ ಮೂವರು ಪ್ರಧಾನ ಕಾರ್ಯದರ್ಶಿಗಳನ್ನು ಪಕ್ಷದ ನಿತ್ಯದ ಆಡಳಿತದ ಅನುಕೂಲಕ್ಕಾಗಿ ಅದೇ ಹುದ್ದೆಯಲ್ಲಿ ಮುಂದುವರಿಸ ಲಾಗಿತ್ತು. ಈಗ ರಾಜ್ಯದಲ್ಲಿ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ನಡೆಯುವ ನಗರಗಳಿಗೆ ವೀಕ್ಷಕರಾಗಿ ನೇಮಕ ಮಾಡಲೂ ಪದಾಧಿಕಾರಿ ಗಳು ಇಲ್ಲದ ಕಾರಣ ಮಾಜಿ ಪದಾಧಿಕಾರಿಗಳನ್ನೇ ಅವರು ನಿರ್ವಹಿಸಿದ್ದ ಹಳೆಯ ಹುದ್ದೆಯಲ್ಲಿ ನಿಯೋಜಿಸಿ ವೀಕ್ಷಕರ ಜವಾಬ್ದಾರಿ ನೀಡಲಾಗಿದೆ.
ಕಾರ್ಯಕರ್ತರಲ್ಲಿ ಅಸಮಾಧಾನ: ಪಕ್ಷದ ನಾಯಕರು ತಮ್ಮ ಹುದ್ದೆಗಳನ್ನು ಪಡೆದುಕೊಳ್ಳುವುದರಲ್ಲಿ ತೋರಿಸುವ ಆಸಕ್ತಿಯನ್ನು ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವಲ್ಲಿ ತೋರಿಸುತ್ತಿಲ್ಲ ಎಂಬ ಆರೋಪ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಪಕ್ಷ ಅಧಿಕಾರ ಇದ್ದಾಗಲೂ ನಿಗಮ ಮಂಡಳಿಗಳಿಗೆ ನೇಮಕ ಮಾಡದೇ ಕಾರ್ಯಕರ್ತರನ್ನು ಅಧಿಕಾರ ವಂಚಿತರನ್ನಾಗಿ ಮಾಡಿದ್ದು, ಪಕ್ಷದ ವಿಷಯದಲ್ಲಿಯೂ ಕಾರ್ಯಕರ್ತರಿಗೆ ಅಧಿಕಾರ ನೀಡದೇ ಇರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ತಳ ಮಟ್ಟದಲ್ಲಿ ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ಕಾರ್ಯಕರ್ತರ ಮಟ್ಟದಲ್ಲಿ ಕೇಳಿ ಬರುತ್ತಿದೆ.
* ಶಂಕರ ಪಾಗೋಜಿ