ಬೆಂಗಳೂರು: ಪೀಠಕ್ಕೆ ಅಗೌರವ ತೋರಿದವರನ್ನು ಅಮಾನತುಪಡಿಸಿದ್ದು ಹೊಸ ಶಾಸಕರಿಗೆ ನೀಡಿದ ತರಬೇತಿಯ ಪ್ರಾಯೋಗಿಕ ಭಾಗ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ವ್ಯಾಖ್ಯಾನಿಸಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆ ಅಧಿವೇಶನ ಆರಂಭಕ್ಕೂ ಮುನ್ನ ಹೊಸ ಶಾಸಕರಿಗೆ ಬೆಂಗಳೂರಿನ ಹೊರವಲಯದಲ್ಲಿ ಮೂರು ದಿನಗಳ ತರಬೇತಿ ನೀಡಲಾಗಿತ್ತು. ಅಲ್ಲಿ ಥಿಯರಿ ಪಾಠ ಆಗಿತ್ತು. ಇಲ್ಲೀಗ ಪ್ರಾಕ್ಟಿಕಲ್ ಪಾಠ ಆಗಿದೆ. ಇದೂ ತರಬೇತಿಯ ಒಂದು ಭಾಗ ಎಂದರು.
ಸ್ಪೀಕರ್ ಆಗಿ ನಾನಂತೂ ಪ್ರತಿಪಕ್ಷದ ಮಿತ್ರ. ನನ್ನ ಮೇಲೆ ಪ್ರತಿಪಕ್ಷದವರಿಗೆ ಸಂಶಯ ಇರಬಹುದು. ಟೀಕಿಸಿರಬಹುದು. ಇವೆಲ್ಲವೂ ಪ್ರಜಾಪ್ರಭುತ್ವದ ಸೌಂದರ್ಯ. ಯಾವುದೇ ಒತ್ತಡಕ್ಕೆ ಮಣಿಯುವ ಅಗತ್ಯ ನನಗಿಲ್ಲ. ಹಿಂದೆಲ್ಲಾ ಇಂತಹ ಅಶಿಸ್ತುಗಳು ನಡೆದಾಗ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರಿಂದಲೇ ಹೀಗಾಗಿದೆ. ಇನ್ನು ಮುಂದಾದರೂ ಅಶಿಸ್ತು ನಿಲ್ಲಬೇಕು.
ಸದನವನ್ನು ಉತ್ತಮವಾಗಿ ನಡೆಸುವುದು ನನ್ನೊಬ್ಬನ ಜವಾಬ್ದಾರಿ ಅಷ್ಟೇ ಅಲ್ಲ. ಎಲ್ಲ ಸದಸ್ಯರ ಹೊಣೆಯೂ ಹೌದು. ಐಎಎಸ್ ಅಧಿಕಾರಿ ನೇಮಕ ಸಂಬಂಧ ಪ್ರತಿಪಕ್ಷ ಸದಸ್ಯರು ಚರ್ಚೆಗೆ ಕೇಳಿದಾಗ ಕೊಟ್ಟಿದ್ದೆ. ಬರಗಾಲ, ರೈತ ವಿಚಾರ ಸೇರಿ ಹಲವು ವಿಷಯಗಳಿದ್ದವು. ಎಲ್ಲವನ್ನೂ ಬಿಟ್ಟು ಈ ವಿಚಾರಕ್ಕೆ ಧರಣಿ ನಡೆಸಿದರು. ಕಲಾಪ ಮುಂದೂಡಿ ಸಂಧಾನಕ್ಕೆ ಯತ್ನಿಸಿದರೂ ರಾಜಿಯಾಗಲಿಲ್ಲ. ಹಲವು ವಿಧೇಯಕಗಳ ಮಂಡನೆ, ಅನುಮೋದನೆ ಮಾಡಬೇಕಿತ್ತು. ಧರಣಿಯಲ್ಲೇ ಕಾಲ ಕಳೆದು ಹೋಗಿದ್ದರಿಂದ ಹಾಗೂ ಗಮನ ಸೆಳೆಯುವ ಸೂಚನೆಗಳು ಸೇರಿ ಅನೇಕ ವಿಷಯಗಳು ಇದ್ದುದರಿಂದ ಭೋಜನ ವಿರಾಮ ನೀಡಲಾಗಲಿಲ್ಲ.
ಬದಲಿಗೆ ಕಲಾಪ ಮುಂದುವರಿಸಿ, ಊಟಕ್ಕೆ ಹೋಗುವವರಿಗೆ ಅವಕಾಶ ಕೊಡಲಾಗಿತ್ತು. ಸಭೆಯೊಂದಕ್ಕೆ ತೆರಳಬೇಕಿದ್ದರಿಂದ ಉಪಸಭಾಧ್ಯಕ್ಷರನ್ನು ಪೀಠದಲ್ಲಿ ಕೂರಿಸಿ ಹೋಗಿದ್ದಾಗ ಕಾಗದ ಪತ್ರಗಳನ್ನು ಅವರ ಮುಖಕ್ಕೆ ತೂರಿದ ಧರಣಿನಿರತರು, ಪೀಠಕ್ಕೆ ಅಗೌರವ ತೋರಿದರು. ಪೀಠದ ಗೌರವ ಉಳಿಸಬೇಕಾದದ್ದು ನನ್ನ ಕರ್ತವ್ಯವಾಗಿದ್ದರಿಂದ 10 ಶಾಸಕರನ್ನು ಅಮಾನತು ಮಾಡುವ ಕನಿಷ್ಠ ಶಿಕ್ಷೆಯನ್ನು ಬೇಸರದಿಂದಲೇ ಕೊಡಬೇಕಾಯಿತು. ಅವರೆಲ್ಲರ ಪಕ್ಷಗಳು ಬೇರೆಯದರೂ ನಮ್ಮ ಆತ್ಮೀಯ ಮಿತ್ರರೆ. ಅವರಿಗೆ ಸಂಶಯವಿದ್ದರೆ ಏನು ಮಾಡುವುದು? ಅದೇ ರೀತಿ ಸದನದಲ್ಲಿ ನಡೆದದ್ದನ್ನು ಸಂವಿಧಾನದ ಮುಖ್ಯಸ್ಥರಾದ ರಾಜ್ಯಪಾಲರಿಗೆ ವರದಿ ಮಾಡುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ನಾನು ಮುಕ್ತ ಮನಸ್ಸಿನಿಂದ ಇದ್ದೇನೆ
ಅಶಿಸ್ತು ತೋರಿದ 10 ಶಾಸಕರನ್ನಷ್ಟೇ 2 ದಿನಗಳ ಕಾಲ ಅಮಾನತುಪಡಿಸಿದ್ದೆ. ಉಳಿದವರು ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೇಳಬಹುದಿತ್ತು ಅಥವಾ ಸದನದ ಹೊರಗೆ ಪ್ರತಿಭಟಿಸುವ ಬದಲು ಮಾತುಕತೆ ಮಾಡಬಹುದಿತ್ತು. ಬುದ್ಧಿವಾದ ಹೇಳಿ ಅವರ ವರ್ತನೆ ಸರಿಪಡಿಸಿಕೊಂಡು ಹೋಗಬಹುದಿತ್ತು. ನಾನಂತೂ ಮುಕ್ತ ಮನಸ್ಸಿನಿಂದ ಇದ್ದೇನೆ. ಎಲ್ಲರೂ ನಮಗೆ ಮಿತ್ರರೇ ಎಂದು ಸ್ಪೀಕರ್ ಹೇಳಿದರು.
ಖಾಸಗಿ ಹೋಟೆಲ್‌ನಲ್ಲಿ ಅತಿಥಿಗಳಿಗೆ ಮುಖ್ಯಮಂತ್ರಿಗಳು ಔತಣ ಕೂಟ ಏರ್ಪಡಿಸಿದ್ದರು. ನನಗೂ ಆಹ್ವಾನವಿತ್ತು. ಹೋಗಿ ಶುಭ ಹಾರೈಸಿ ಬಂದೆನೇ ಹೊರತು, ಅಲ್ಲಿ ಯಾವುದೇ ರಾಜಕೀಯ ಸಭೆ, ಚರ್ಚೆಗಳಲ್ಲಿ ನಾನು ಪಾಲ್ಗೊಂಡಿಲ್ಲ. ಸ್ಪೀಕರ್ ಸ್ಥಾನದಲ್ಲಿದ್ದಾಗ ಸಿಎಂ ಬೇಡ, ಇನ್ನೊಬ್ಬರು ಬೇಕು ಎನ್ನಲಾಗುವುದಿಲ್ಲ.
ಯು.ಟಿ. ಖಾದರ್, ಸ್ಪೀಕರ್