Advertisement

ಮದ್ಯ ಸೇವಿಸಿ ಸೇವೆಗೆ ಹಾಜರಾದರೆ ಅಮಾನತು

06:33 PM Dec 16, 2022 | Team Udayavani |

ಚಿಕ್ಕಬಳ್ಳಾಪುರ: ಮದ್ಯ ಸೇವಿಸಿ ಶಾಲಾ-ಕಾಲೇಜು ಗಳಿಗೆ, ಸರ್ಕಾರಿ ಕಚೇರಿಗಳಿಗೆ ಹಾಜರಾಗಿ ಕರ್ತವ್ಯ ಲೋಪವೆಸಗುವ ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅವರು ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಜನಾಂಗದ ಮೇಲೆ ದೌರ್ಜನ್ಯಗಳನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಸಫಾಯಿ ಕರ್ಮ ಚಾರಿಗಳ ಸುರಕ್ಷತೆಗಾಗಿ ರಚಿಸಿರುವ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಯಾವುದೇ ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರು ಮದ್ಯ ಸೇವಿಸಿ ಹಾಜರಾಗುವುದು ಕಂಡುಬಂದಲ್ಲಿ ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸ ಬೇಕು. ಮದ್ಯಪಾನ ಸೇವನೆ ಖಚಿತವಾದರೆ ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಕಾನೂನು ಶಿಸ್ತು ಕ್ರಮವನ್ನು ವಹಿಸಬೇಕು. ಅಮಾನತುಗೊಂಡ ಜಾಗಕ್ಕೆ ಬೇರೊಬ್ಬ ಶಿಕ್ಷಕರನ್ನು ನೇಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಶಾನಕ್ಕೆ ರಸ್ತೆ ಮಾರ್ಗ: ಗ್ರಾಮೀಣ ಭಾಗದಲ್ಲಿರುವ ಸಾರ್ವಜನಿಕರ ಸ್ಮಶಾನಗಳಿಗೆ ಸೂಕ್ತ ರಸ್ತೆ ಮಾರ್ಗ ಗಳನ್ನು ಕಲ್ಪಿಸಬೇಕು. ಜತೆಗೆ ರಾಜಕಾಲುವೆ, ಸರ್ಕಾರಿ ಜಮೀನು ಇತರೆ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು. ಸರ್ಕಾರದ ಆಶಯ ವನ್ನು, ಯೋಜನೆಗಳ ಉದ್ದೇಶವನ್ನು ಈಡೇರಿಸುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಿದರೆ ಸಾಕು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ಫಲಾನು ಭವಿಗಳಿಗೆ ಯೋಜನೆ ಸೇವೆಗಳು ಅಚ್ಚುಕಟ್ಟಾಗಿ ಪೂರ್ಣ ಪ್ರಮಾಣದಲ್ಲಿ ತಲುಪಿಸಬೇಕು ಎಂದು ಹೇಳಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕ ವಾಗಿ ಫಲಾನುಭವಿಗಳಿಗೆ ತಲುಪಿಸದಿದ್ದರೂ ಈ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಂಬಂಧಪಟ್ಟವ ರನ್ನು ಶಿಕ್ಷೆಗೆ ಒಳಪಡಿಸಬಹುದುದಾಗಿದೆ ಅಂತಹ ಪರಿಸ್ಥಿತಿಗೆ ಜಿಲ್ಲೆಯ ಯಾವ ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂದರು.

Advertisement

ಜಿಲ್ಲೆಯಲ್ಲಿ ಯಾರಾದರೂ ಸಫಾಯಿ ಕರ್ಮಾ ಚಾರಿಗಳು, ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳು ಇದ್ದಲ್ಲಿ ಅಂತಹವನ್ನು ಗುರ್ತಿಸಿ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕ್ಷೇತ್ರ ವೀಕ್ಷಣೆ ಮಾಡಿ ಪರಿಶೀಲಿಸಬೇಕು ಎಂದು ಸೂಚನೆಗಳನ್ನು ನೀಡಿದರು.

ಜಿಪಂ ಸಿಇಒ ಪಿ.ಶಿವಶಂಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಲಕ್ಷ್ಮಣರೆಡ್ಡಿ, ಎಲ್ಲಾ ತಾಲೂಕು ತಹಸೀಲ್ದಾರ್‌ಗಳು, ತಾಪಂ ಇಒ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಮೇಲೂರು ಮಂಜುನಾಥ್‌, ಎಂ.ವೇಣು, ರತ್ನಮ್ಮ, ಕೆ.ನರೇಂದ್ರ ಇತರರಿದ್ದರು.

ಒತ್ತಡಗಳಿಗೆ ಮಣಿಯದಿರಲು ಡೀಸಿ ಸಲಹೆ
ಎಸ್‌.ಸಿ.ಪಿ ಮತ್ತು ಟಿ.ಎಸ್‌.ಪಿ ಯೋಜನೆಯಡಿ ಠಾಣೆಗಳಲ್ಲಿ ನೀಡಲಾಗುವ ದೂರುಗಳನ್ನು ಸಮರ್ಪಕವಾಗಿ, ತ್ವರಿತಗತಿಯಲ್ಲಿ ಎಫ್‌ಐಆರ್‌ ದಾಖಲಿಸಿ, ದೋಷರೋಪ ಪಟ್ಟಿಯನ್ನು ಸೂಕ್ತ ರೀತಿಯಲ್ಲಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಠಾಣೆಯಲ್ಲಿನ ಅಧಿಕಾರಿಗಳು ಗಮನಹರಿಸಬೇಕು. ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬಾರದು. ಕಾನೂನು ಬದ್ಧವಾಗಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿ ನಾಗರಾಜ್‌ ಅಧಿಕಾರಿಗಳಿಗೆ ತಿಳಿಸಿದರು.

ಬಾರ್‌ಗಳ ಪರವನಾಗಿ ರದ್ದುಪಡಿಸಿ
ಬಾರ್‌, ರೆಸ್ಟೋರೆಂಟ್‌ ಮದ್ಯದಂಗಡಿಗಳಿಂದ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ನೇರವಾಗಿ ಸರಬರಾಜು ಮಾಡುತ್ತಿರುವ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಅಂತಹ ಬಾರ್‌ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಅವರ ಪರವಾನಗಿ ರದ್ದುಪಡಿಸಬೇಕು. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಅಬಕಾರಿ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಹೆಚ್ಚೆಚ್ಚು ಪ್ರಕರಣ ದಾಖಲಿಸುವ ಮೂಲಕ ಅಕ್ರಮ ಮದ್ಯ ಮಾರಾಟವನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಹತೋಟಿಗೆ ತರಬೇಕು ಎಂದು ನಾಗರಾಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next