ಗುಜರಾತ್‌ನ ಮೊರ್ಬಿಯಲ್ಲಿನ ತೂಗುಸೇತುವೆ ದುರಂತದಿಂದಾಗಿ 141 ಮಂದಿ ಸಾವನ್ನಪ್ಪಿದ್ದು, ಇದೊಂದು ಅತ್ಯಂತ ಘನಘೋರ ಕೃತ್ಯವಾಗಿದೆ. ಇನ್ನೂ ರಕ್ಷಣ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿಯೂ ಎದುರಾಗಿದೆ. ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಮತ್ತು ಈ ತೂಗುಸೇತುವೆ ನಿರ್ವಹಣೆಯ ಹೊಣೆ ಹೊತ್ತಿದ್ದ ಕಂಪೆನಿಯ ಹೊಣೆಗೇಡಿತನದಿಂದಾಗಿ ಈ ದುರಂತ ಸಂಭವಿಸಿದ್ದು, ಅನ್ಯಾಯವಾಗಿ ಮುಗ್ಧರು ಪ್ರಾಣ ಕಳೆದುಕೊಂಡಿದ್ದಾರೆ.
ಅಂದ ಹಾಗೆ ಈ ತೂಗುಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದು, ಇತ್ತೀಚೆಗಷ್ಟೇ ಅದನ್ನು 2 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿ ನಡೆಸಲಾಗಿತ್ತು. ಅಲ್ಲದೆ ದುರಂತ ನಡೆದ ನಾಲ್ಕು ದಿನದ ಹಿಂದಷ್ಟೇ ಈ ಸೇತುವೆಯನ್ನು ಜನರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ಅಂದರೆ ನಾಲ್ಕೇ ದಿನದಲ್ಲಿ ಈ ಘಟನೆ ನಡೆದಿದೆ ಎಂದರೆ ದುರಸ್ತಿ ಕಾರ್ಯವನ್ನು ಸರಿಯಾಗಿ ನಡೆಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ.
ಇತಿಹಾಸದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಈ ತೂಗು ಸೇತುವೆಯನ್ನು 1877ರಲ್ಲಿ ನಿರ್ಮಿಸಲಾಗಿದ್ದು, 1879ರಲ್ಲಿ ಉದ್ಘಾಟನೆ ಮಾಡಲಾಗಿತ್ತು. ಕಳೆದ ಮಾರ್ಚ್‌ನಲ್ಲಷ್ಟೇ ಈ ಸೇತುವೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಒರೆವಾ ಗ್ರೂಪ್ ದುರಸ್ತಿ ಕಾರ್ಯ ಮಾಡಿದ್ದು, ಮುಂದಿನ 15 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗಿತ್ತು. ಆದರೆ ಜನರ ಪ್ರವೇಶಕ್ಕೆ ಮುಕ್ತವಾದ ನಾಲ್ಕೇ ದಿನದಲ್ಲಿ ತೂಗುಸೇತುವೆ ಕುಸಿದುಬಿದ್ದಿದೆ ಎಂದರೆ ಸರಿಯಾಗಿ ಮಾಡಿರಲಿಲ್ಲ ಎಂದು ಹೇಳಬಹುದು.
ವಿಚಿತ್ರವೆಂದರೆ ಈ ತೂಗುಸೇತುವೆ ಒಮ್ಮೆಗೆ 125 ಮಂದಿಯ ಸಾಮರ್ಥ್ಯವನ್ನು ಮಾತ್ರ ತಡೆಯುವ ಶಕ್ತಿ ಹೊಂದಿತ್ತು. ಇದು ಗೊತ್ತಿದ್ದರೂ 250ರಿಂದ 300 ಮಂದಿಯನ್ನು ಸೇತುವೆ ಮೇಲೆ ಬಿಟ್ಟಿದ್ದೂ ತಪ್ಪು. ಹಾಗೆಯೇ ಸೇತುವೆಯ ಫಿಟ್‌ನೆಸ್ ಪ್ರಮಾಣಪತ್ರ ಇಲ್ಲದೇ ಮುಕ್ತಗೊಳಿಸಿದ್ದೂ ತಪ್ಪು ಎಂದು ಸ್ಥಳೀಯ ಆಡಳಿತವೇ ಹೇಳಿದೆ.
ಇಷ್ಟೆಲ್ಲ ಸಂಗತಿಗಳನ್ನು ಗಮನಿಸಿದ ಅನಂತರ ಇಲ್ಲಿ ತಪ್ಪು ಮಾಡಿದ್ದು ಯಾರು ಎಂಬ ಪ್ರಶ್ನೆ ಮೂಡುತ್ತದೆ. ರಾಜ್ಯ ಸರಕಾರವೂ ಈ ಬಗ್ಗೆ ಒಂದಷ್ಟು ಗಮನಹರಿಸಬೇಕಿತ್ತು. ಸಾಮಾನ್ಯವಾಗಿ ಜನ ಗುಂಪು ಗುಂಪಾಗಿ ಸೇರುವೆಡೆ ಎಷ್ಟೇ ಸುರಕ್ಷತ ಕ್ರಮಗಳನ್ನು ತೆಗೆದುಕೊಂಡರೂ ಸಾಲದು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲೇಬಾರದು. ಒಂದೇ ಒಂದು ತಪ್ಪು ಇಂಥ ಘಟನೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅಧಿಕಾರಿಗಳೂ ಗಮನದಲ್ಲಿ ಇರಿಸಿಕೊಳ್ಳಬೇಕು.
ಹಾಗೆಯೇ ಈ ತೂಗುಸೇತುವೆಯ ನಿರ್ವಹಣೆ ಹೊತ್ತಿದ್ದ ಖಾಸಗಿ ಸಂಸ್ಥೆ ವಯಸ್ಕರಿಗೆ 17 ರೂ. ಮಕ್ಕಳಿಗೆ 12 ರೂ. ಟಿಕೆಟ್ ಹಣ ವಸೂಲಿ ಮಾಡಿಕೊಂಡಿದೆ. ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲದೆಯೇ ಸೇತುವೆ ಆರಂಭಿಸಿದ್ದು ಹೇಗೆ? ಹಾಗೆಯೇ ಯಾವುದೇ ಮುನ್ನೆಚ್ಚರಿಕ ಕ್ರಮಗಳಿಲ್ಲದೇ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಿದ್ದು ಹೇಗೆ? ಈ ಪ್ರಮಾಣದ ಜನರನ್ನು ತಡೆದುಕೊಳ್ಳುವ ಶಕ್ತಿ ಈ ತೂಗುಸೇತುವೆಗಿದೆಯೇ ಎಂಬ ಪರೀಕ್ಷೆಯನ್ನಾದರೂ ಮಾಡಿಸಲಾಗಿತ್ತೇ ಎಂಬ ಪ್ರಶ್ನೆಗಳೂ ಮೂಡುತ್ತವೆ. ಆದರೆ ಈ ಎಲ್ಲÉ ಪ್ರಶ್ನೆಗಳಿಗೆ ಗುಜರಾತ್ ಸರಕಾರ ನೇಮಕ ಮಾಡಿರುವ ಆರು ಮಂದಿ ಸದಸ್ಯರ ಸಮಿತಿ ಉತ್ತರ ನೀಡಬೇಕು. ಅಲ್ಲದೇ ಪ್ರಾಣ ಕಳೆದುಕೊಂಡ ಮುಗ್ಧರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸವನ್ನಾದರೂ ಮಾಡಬೇಕು.