Advertisement

ಪರಿಷತ್ ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತು ಮಾಡಲಿ: ಸಚಿವ ಎಸ್ ಟಿ ಸೋಮಶೇಖರ್

11:27 AM Dec 16, 2020 | keerthan |

ಮೈಸೂರು: ಸಭಾಪತಿಗಳ ಕುರ್ಚಿಗೆ ಅದರದ್ದೇ ಆದ ಗೌರವವಿದೆ. ಆದರೆ, ಮೊದಲ ಬಾರಿ ಎಂಎಲ್ ಸಿ ಆದವರೂ ಸಹ ಆ ಖುರ್ಚಿಯಲ್ಲಿ ಕೂರುತ್ತಾರೆಂದರೆ ಏನರ್ಥ? ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯವನ್ನು ನಮ್ಮ ಪಕ್ಷದ ಸದಸ್ಯರು ಮಂಡಿಸಿದ್ದು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಎಲ್ಲರಿಗೂ ನೀತಿ, ಕಾನೂನು ಹೇಳುವ ಅವರು ತಮ್ಮ ಪಕ್ಷದ ನಾಯರಿಗೆ ಬುದ್ಧಿ ಹೇಳಲಿ, ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಲಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

Advertisement

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೌರವಾನ್ವಿತ ಹಿರಿಯ ಸದಸ್ಯರೂ ಉಪ ಸಭಾಪತಿಗಳಾದ ಧರ್ಮೇಗೌಡರನ್ನು ಎಳೆದಾಡಿ ಗೂಂಡಾಗಿರಿ ಮಾಡಿದ ಹಾಗೆ ಬಲತ್ಕಾರವಾಗಿ ಕುರ್ಚಿಯಿಂದ ಎಳೆದಾಡಿದ್ದು ಖಂಡನೀಯ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಗೂಂಡಾಗಿರಿ ಮಾಡಿದವರನ್ನು ಕಾಂಗ್ರೆಸ್ ಅಮಾನತು ಮಾಡಲಿ

ಕಾಂಗ್ರೆಸ್ ನವರಿಗೆ ಮರ್ಯಾದೆ ಉಳಿಸಿಕೊಳ್ಳಬೇಕೆಂದಿದ್ದರೆ ಹೀಗೆ ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಬೇಕು. ಚಿಂತಕರ, ಬುದ್ದಿವಂತರ ಚಾವಡಿ ಎಂದೇ ಹೆಸರಾಗಿದ್ದ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಇಂತಹ ಒಂದು ಕೀಳುಮಟ್ಟದ ರಾಜಕೀಯಕ್ಕೆ ಇಳಿಯುತ್ತದೆ ಎಂದರೆ ಹೇಗೆ ಎಂದು ಸಚಿವರು ಪ್ರಶ್ನಿಸಿದರು.

ಸಭಾಪತಿಗಳ ಮೇಲೆ ಆರೋಪ ಬಂದ ಮೇಲೆ ಅವರು ಆ ಕುರ್ಚಿಯಲ್ಲಿ ಕೂರುವಂತಿಲ್ಲ. ಅವಿಶ್ವಾಸ ನಿರ್ಣಯ ಗೊತ್ತುವಳಿಯಾದ ಮೇಲೆ ಸಭಾಪತಿಗಳಾದವರು ಕುರ್ಚಿಯನ್ನು ಬಿಟ್ಟುಕೊಡಬೇಕು. 14 ದಿನದ ಅವಧಿಯಲ್ಲಿ ಅವಕಾಶ ಕಲ್ಪಿಸಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕು. ಆದರೆ, ಅದಕ್ಕೆ ಅವಕಾಶ ಕೊಡದ ಸಭಾಪತಿಗಳ ನಡೆ ಸರಿಯಲ್ಲ ಎಂದು ಸಚಿವರು ಖಂಡಿಸಿದರು.

Advertisement

ಕಾಂಗ್ರೆಸ್ ನವರ ಷಡ್ಯಂತ್ರ

ಇದು ನೂರಕ್ಕೆ ನೂರು ಕಾಂಗ್ರೆಸ್ ನವರ ಪೂರ್ವನಿಯೋಜಿತ ಸಂಚು. ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿಯೇ ಗೂಂಡಾಗಿರಿ ಮಾಡುವ ಹಾಗೂ ದಾಂಧಲೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಇದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next