Advertisement

ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರನ ಸೆರೆ?

10:45 PM Oct 16, 2019 | Lakshmi GovindaRaju |

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರನೊಬ್ಬನ ಬಂಧನವಾಗಿದೆ ಎಂಬ ವದಂತಿ ಹಬ್ಬಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಆದರೆ, ಜಿಲ್ಲಾ ಪೊಲೀಸ್‌ ಇಲಾಖೆ ಮಾತ್ರ ಈ ವಿಚಾರವನ್ನು ತಳ್ಳಿ ಹಾಕಿದ್ದು, ಸ್ಯಾಟಲೈಟ್‌ ಫೋನ್‌ ಬಳಕೆ ಆಗಿರುವ ಬಗ್ಗೆ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದೆ.

Advertisement

ತೀರ್ಥಹಳ್ಳಿಯ ಸುರಾನಿ ಎಂಬ ಗ್ರಾಮದಲ್ಲಿ ಶಿವಮೊಗ್ಗ ಪೊಲೀಸರು ಮಂಗಳವಾರ ಭಾರೀ ಹುಡುಕಾಟ ನಡೆಸಿದ್ದು, ಇಲ್ಲಿನ ತೋಟದ ಮನೆಯೊಂದರಲ್ಲಿ ಕೆಲ ಹೊತ್ತು ತಪಾಸಣೆ ನಡೆಸಿದರು. ಈ ಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇಲ್ಲಿ ಓಡಾಡುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಈ ಕಾರಣಕ್ಕೆ ಶಂಕಿತ ಭಯೋತ್ಪಾದಕರ ಬಂಧನವಾಗಿದೆ ಎಂಬ ವದಂತಿ ಹಬ್ಬಿದೆ. ಭಾರತದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಗೆ ನಿಷೇಧವಿದೆ. ಆದರೂ ತೀರ್ಥಹಳ್ಳಿಯ ಸುರಾನಿ ಭಾಗದಲ್ಲಿ ಕೆಲ ದಿನದ ಹಿಂದೆ ಸ್ಯಾಟಲೈಟ್‌ ಫೋನ್‌ ಸಿಗ್ನಲ್‌ ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಪೊಲೀಸ್‌ ಇಲಾಖೆಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭ್ಯವಾಗಿತ್ತು.

ಹಾಗಾಗಿ, ದಿಢೀರ್‌ ತಪಾಸಣೆ ನಡೆಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಈ ಹಿಂದೆ ಶಂಕಿತ ಭಯೋತ್ಪಾದಕರ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಸುರಾನಿ ಗ್ರಾಮದಲ್ಲಿ ನಡೆದ ಪೊಲೀಸ್‌ ತಪಾಸಣೆ ಬಗ್ಗೆ ವದಂತಿ ಹಬ್ಬಲು ಕಾರಣವಾಗಿದೆ.

ಜನರು ಆತಂಕಕ್ಕೀಡಾಗುವ ಅಗತ್ಯವಿಲ್ಲ. ಕೆಲವು ಪೂರ್ವಭಾವಿ ತನಿಖೆಗಾಗಿ ತಪಾಸಣೆ ನಡೆಸಲಾಗಿದೆ. ಉಗ್ರರ ಬಂಧನವಾಗಿದೆ ಅನ್ನುವುದು ಸುಳ್ಳು.
-ಕೆ.ಎಂ.ಶಾಂತರಾಜು, ಎಸ್‌ಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next