Advertisement

ಉಡುಪಿ ನ್ಯಾಯಾಲಯದಲ್ಲಿ ಶಂಕಿತ ನಕ್ಸಲ್‌ ಘೋಷಣೆ‌

10:30 AM Jan 06, 2018 | Team Udayavani |

ಉಡುಪಿ: “ಹುತಾತ್ಮ ಗೌರಿ ಲಂಕೇಶ್‌ ಅವರಿಗೆ ವೀರ ವಂದನೆ’, ಕಲಬುರ್ಗಿ, ಗೌರಿ ಹತ್ಯೆಗೈದ ಸಂಘ ಪರಿವಾರವು ಭಯೋತ್ಪಾದನೆಯನ್ನು ನಿಲ್ಲಿಸಲಿ… ಹೀಗೆಂದು ಶಂಕಿತ ನಕ್ಸಲ್‌ ಹೋರಾಟಗಾರ ಈಶ್ವರ ಯಾನೆ ವಜ್ರಮುನಿ ಯಾನೆ ವೀರ ಮಣಿ ಜ. 5ರಂದು ಉಡುಪಿ ಕೋರ್ಟ್‌ ಆವರಣದಲ್ಲಿ ಘೋಷಣೆ ಕೂಗಿದ್ದಾನೆ.

Advertisement

ಹೆಬ್ರಿಯ ಶಿಕ್ಷಕ ಭೋಜ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವೀರಮಣಿಯನ್ನು ಪೊಲೀಸರು ಕೊಯಮತ್ತೂರು ಜೈಲಿನಿಂದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯಕ್ಕೆ ಹಾಜರುಪಡಿಸಲು ಕರೆ ತಂದಿದ್ದಾಗ ಆತ ಮಾವೋವಾದಿ ಪರ ಘೋಷಣೆ ಕೂಗಿದ.

ಮತ್ತೂ ಮೂವರು ಹಾಜರು
2008ರ ಮೇ 15ರಂದು ಹೆಬ್ರಿಯ ಸೀತಾನದಿಯಲ್ಲಿ ಪೊಲೀಸ್‌ ಮಾಹಿತಿದಾರ ಎನ್ನುವ ಕಾರಣದಿಂದ ಭೋಜ ಶೆಟ್ಟಿ ಮತ್ತು ಸುರೇಶ್‌ ಶೆಟ್ಟಿ ಅವರನ್ನು  ಗುಂಡಿಕ್ಕಿ ಕೊಲೆ ಗೈದ ಆರೋಪ ಆತನ ಮೇಲಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದ  ಆರೋಪಿಗಳಾದ ಬೆಂಗಳೂರು ಜೈಲಿನಲ್ಲಿದ್ದ ರಮೇಶ್‌ ಹಾಗೂ ಜಾಮೀನಿನಲ್ಲಿರುವ ನೀಲಗುಳಿ ಪದ್ಮನಾಭ ಮತ್ತು ಪಾವಗಡದ ಸಂಜೀವ್‌ ಕುಮಾರ್‌ ಅವರನ್ನು ಕೂಡ   ಕೋರ್ಟ್‌ಗೆ ಹಾಜರುಪಡಿಸಿದ್ದರು. ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ, ಆರೋಪಿಗಳ ಪರ ಹಿರಿಯ ಕ್ರಿಮಿನಲ್‌ ವಕೀಲ ಎಂ. ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು.

ಮಾ. 12ಕ್ಕೆ ಮುಂದಿನ ವಿಚಾರಣೆ
ಸೆಷನ್ಸ್‌  ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ ಅವರು  ವಿಚಾರಣೆ ನಡೆಸಿದರು. ತಮ್ಮ ಮೇಲಿನ ಆರೋಪವನ್ನು ಆರೋಪಿಗಳು ಅಲ್ಲಗಳೆದಿದ್ದು,  ವಿಚಾರಣೆ ಯನ್ನು ಮಾ.12ಕ್ಕೆ ಮುಂದೂಡಲಾಯಿತು. ಭೋಜ ಶೆಟ್ಟಿ ಕೊಲೆ ಪ್ರಕರಣದ 11 ಆರೋಪಿಗಳ ಪೈಕಿ ಪ್ರಮುಖರಾದ ಮನೋಹರ್‌ ಮತ್ತು ವಸಂತ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದು, ವೀರಮಣಿ ಮತ್ತು ರಮೇಶ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂಜೀವ ಕೋರ್ಟ್‌ಗೆ ಹಾಜರಾಗಿದ್ದು, ಬಿ.ಜೆ. ಕೃಷ್ಣಮೂರ್ತಿ ತಲೆಮರೆಸಿ ಕೊಂಡಿದ್ದಾನೆ. ದೇವೇಂದ್ರ, ನಂದಕುಮಾರ್‌, ಆಶಾ ಮತ್ತು ಚಂದ್ರಶೇಖರ ಗೋರಬಾಳ ಖುಲಾಸೆಗೊಂಡಿದ್ದಾರೆ.   ನೀಲಗುಳಿ ಪದ್ಮನಾಭನನ್ನು ಚಿಕ್ಕಮಗಳೂರಿನಲ್ಲಿ 2016 ನ. 14ರಂದು ಗೌರಿ ಲಂಕೇಶ್‌ ಮತ್ತಿತರರು ಸೇರಿ  ನ್ಯಾಯಾಲಯಕ್ಕೆ ಹಾಜರಾಗುವಂತೆ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next