Advertisement

ನಕ್ಸಲ್‌ ಕ್ರೌರ್ಯ; 26 ಯೋಧರು ಹುತಾತ್ಮ, ಆರು ಮಂದಿ ಗಂಭೀರ

03:45 AM Apr 25, 2017 | |

ರಾಯಪುರ/ನವದೆಹಲಿ: ಕೆಂಪು ಉಗ್ರರ ಕ್ರೌರ್ಯ ಎಲ್ಲೆ ಮೀರಿದೆ. ಛತ್ತೀಸ್‌ಗಡದ ಸುಖ್ಮಾ ಜಿಲ್ಲೆಯಲ್ಲಿ ಸೋಮವಾರ 300 ನಕ್ಸಲರು ಕೇಂದ್ರ ಮೀಸಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ದುರ್ಘ‌ಟನೆಯಲ್ಲಿ 26 ಯೋಧರು ಹುತಾತ್ಮರಾಗಿದ್ದಾರೆ. 6 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ ಏಳೆಂಟು ಯೋಧರು ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಹೇಳಲಾಗುತ್ತಿದೆ.

Advertisement

ಸೋಮವಾರ ಮಧ್ಯಾಹ್ನ 12.25ರ ಹೊತ್ತಿಗೆ ಚಿಂತಾಗುಫಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಬುರ್ಕಾಪಾಲ್‌ ಗ್ರಾಮದ ಬಳಿ ಈ ಘಟನೆ ನಡೆದಿದೆ. ದಕ್ಷಿಣ ಬಸ್ತಾರ್‌ ಪ್ರದೇಶದ ಕಾಲಪತ್ತರ್‌ನಲ್ಲಿ ರಸ್ತೆ ಮಾರ್ಗವನ್ನು ತೆರವು ಮಾಡುವ ವೇಳೆ ನಕ್ಸಲೀಯರು ದಾಳಿ ನಡೆಸಿದ್ದಾರೆ. ಮೊದಲಿಗೆ ಸ್ಥಳೀಯ ಗ್ರಾಮಗಳ ಜನರನ್ನು ಕಳುಹಿಸಿ, ಸಿಆರ್‌ಪಿಎಫ್ ಯೋಧರ ಚಲನವಲನ ಗ್ರಹಿಸಿದ ನಕ್ಸಲೀಯರು, ಬಳಿಕ 300 ಮಂದಿಯ ತಂಡದೊಂದಿಗೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲ್‌ ಪ್ರಾಬಲ್ಯ ಹೆಚ್ಚಿದ್ದು, ಇದೇ ವರ್ಷದ ಮಾರ್ಚ್‌ 11 ರಂದು 12 ಸಿಆರ್‌ಪಿಎಫ್ ಯೋಧರು ಕೆಂಪು ಉಗ್ರರ ದಾಳಿಗೆ ಹುತಾತ್ಮರಾಗಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, “ಇದೊಂದು ಹೇಡಿತನದ ಮತ್ತು ಅತ್ಯಂತ ನೋವಿನ ಘಟನೆಯಾಗಿದೆ. ಯಾವುದೇ ಕಾರಣಕ್ಕೂ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ,’ ಎಂದಿದ್ದಾರೆ. ಜತೆಗೆ, ಹುತಾತ್ಮ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ: ಸಿಆರ್‌ಪಿಎಫ್ನ ಡಿಐಜಿ ಎಂ ದಿನಕರನ್‌ ಅವರು, ಯೋಧರ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ. ಸದ್ಯ 11 ಮೃತದೇಹಗಳು ಪತ್ತೆಯಾಗಿವೆ. ಉಳಿದ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜತೆಗೆ ಇನ್ನೂ 7 ರಿಂದ 8 ಯೋಧರು ಕಣ್ಮರೆಯಾಗಿದ್ದಾರೆ. ಇಡೀ ಪ್ರದೇಶವನ್ನು ಶೋಧ ಮಾಡಿದ ಬಳಿಕವಷ್ಟೇ ನಿಖರವಾಗಿ ಹೇಳಲು ಸಾಧ್ಯ ಎಂದೂ ಹೇಳಿದ್ದಾರೆ. 74ನೇ ಬೆಟಾಲಿಯನ್‌ನ ಕೇಂದ್ರ ಮೀಸಲು ಪಡೆಯಲ್ಲಿ ಸುಮಾರು 99 ಯೋಧರು ಇದ್ದರು ಎನ್ನಲಾಗಿದೆ. ಈ ಪಡೆಯನ್ನು ನಕ್ಸಲ್‌ ನಿಗ್ರಹ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿತ್ತು.

ಘಟನೆಯಲ್ಲಿ ಗಾಯಗೊಂಡ 6 ಯೋಧರನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಇಡೀ ಘಟನೆ ಬಗ್ಗೆ ಗಾಯಗೊಂಡ ಯೋಧ ಕಾನ್‌ಸ್ಟೆàಬಲ್‌ ಶೇರ್‌ ಮಹಮ್ಮದ್‌ ಅವರು ಮಾಹಿತಿ ನೀಡಿದ್ದಾರೆ. “ಮೊದಲಿಗೆ ಗ್ರಾಮಸ್ಥರನ್ನು ಕಳುಹಿಸಿದರು. ನಾವು ಬರುತ್ತಿದ್ದುದು ಖಚಿತವಾಗುತ್ತಿದ್ದಂತೆ, ನಮ್ಮ ಮೇಲೆ ಏಕಾಏಕಿ ದಾಳಿ ನಡೆಸಿದರು. ಅವರು ಸುಮಾರು 300 ಮಂದಿ ಇದ್ದರು. ಕೆಲವು ಮಹಿಳೆಯರೂ ಇದ್ದರು. ಕಪ್ಪು ಸಮವಸ್ತ್ರ ಧರಿಸಿದ್ದ ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಎಕೆ 47 ಸರಣಿಯ ರೈಫ‌ಲ್‌ಗ‌ಳಿದ್ದವು. ನಾವೂ ಪ್ರತಿದಾಳಿ ನಡೆಸಿದೆವು. ಅವರ ಕಡೆಗಳಲ್ಲಿ 11 ರಿಂದ 12 ಮಂದಿ ಸತ್ತಿರಬಹುದು. ನಮ್ಮಲ್ಲಿ ಮೃತರಾದ ಯೋಧರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ನಕ್ಸಲೀಯರು ಕದ್ದೊಯ್ದಿರಬಹುದು’ ಎಂದು ಅವರು ಹೇಳಿದ್ದಾರೆ. ನಂಬಲರ್ಹ ಮೂಲಗಳ ಪ್ರಕಾರ, ಈ ಘಟನೆಯಲ್ಲಿ ಬೆಟಾಲಿಯನ್‌ನ ಕಮಾಂಡರ್‌ ಕೂಡ ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ.

Advertisement

ದಾಳಿಯನ್ನು  ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಖಂಡಿಸಿದ್ದಾರೆ. ಸಿಆರ್‌ಪಿಎಫ್ನ ಯೋಧರ ಸಾವು ಅತೀವ ದುಃಖ ತಂದಿದೆ ಎಂದಿರುವ ಅವರು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ ಗೃಹ ಖಾತೆ ಸಹಾಯಕ ಸಚಿವ ಹನ್ಸರಾಜ್‌ ಅಹಿರ್‌ ಅವರನ್ನು ಛತ್ತೀಸ್‌ಗಡಕ್ಕೆ ಕಳುಹಿಸಿದ್ದು ಪರಿಸ್ಥಿತಿ ಅವಲೋಕಿಸುವಂತೆ ಸೂಚಿಸಿದ್ದಾರೆ.

ಇದೇ ವೇಳೆ ದೆಹಲಿ ಭೇಟಿಯಲ್ಲಿದ್ದ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರು, ಪ್ರವಾಸ ಮೊಟಕುಗೊಳಿಸಿ ರಾಯು³ರಕ್ಕೆ ವಾಪಸಾಗಿ, ತುರ್ತು ಸಭೆ ನಡೆಸಿದ್ದಾರೆ.

ಘಟನೆಯ ವಿವರ
ಎಲ್ಲಿ?

ಛತ್ತೀಸ್‌ಗಡದ ಸುಖಾ¾ ಜಿಲ್ಲೆ

ಯಾವಾಗ?
ಸೋಮವಾರ ಮಧ್ಯಾಹ್ನ 12.25

ಏನಾಯ್ತು?
ರಸ್ತೆ ಮಾರ್ಗ ತೆರವು ವೇಳೆ ಯೋಧರ ಮೇಲೆ ನಕ್ಸಲರ ದಾಳಿ

ಹೇಗೆ?
ಸುಮಾರು 300 ನಕ್ಸಲರ ತಂಡದಿಂದ ಏಕಾಏಕಿ ದಾಳಿ, 26 ಯೋಧರ ಸಾವು

ಹುತಾತ್ಮರಾದವರ ಸಂಖ್ಯೆ
26 (ಇನ್ನೂ ಹೆಚ್ಚಬಹುದು)
ಗಾಯಾಳುಗಳ ಸಂಖ್ಯೆ 6 (ಕೆಲವರ ಸ್ಥಿತಿ ಚಿಂತಾಜನಕ)

ದಶಕದಲ್ಲಿನ ನಕ್ಸಲರ ಅಟ್ಟಹಾಸ
2008, ಜೂ. 29
ಒಡಿಶಾದ ಬಲಿಮೇಲಾ ಜಲಾಶಯ – 38 ಯೋಧರ ಸಾವು
2008 ಜು. 16
ಒಡಿಶಾದ ಮಲ್ಕನ್‌ಗಿರಿ ಜಿಲ್ಲೆ – 21 ಪೊಲೀಸರ ಸಾವು
2009 ಏ. 22
ಜಾರ್ಖಂಡ್‌ನ‌ ಲಾತೇಹರ್‌ ಜಿಲ್ಲೆ – 300 ಮಂದಿ ಇದ್ದ ರೈಲನ್ನೇ ಅಪಹರಿಸಿದ ನಕ್ಸಲರು, ಕಡೆಗೆ ಎಲ್ಲರ ಬಿಡುಗಡೆ
2009 ಮೇ 22
ಮಹಾರಾಷ್ಟ್ರದ ಗಡಿcರೋಲಿ ಜಿಲ್ಲೆ – 16 ಪೊಲೀಸರ ಸಾವು
2009ರ ಸೆ. 26
ಛತ್ತೀಸ್‌ಗಡದ ಬಿಜೆಪಿ ಸಂಸದ ಬಲಿರಾಂ ಕಶ್ಯಪ್‌ ಪುತ್ರನ ಹತ್ಯೆ
2009 ಅ. 8
ಮಹಾರಾಷ್ಟ್ರದ ಗಡಿcರೋಲಿ ಜಿಲ್ಲೆ – 17 ಪೊಲೀಸರ ಸಾವು
2010ರ ಫೆ. 15
ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ – ಈಸ್ಟರ್ನ್ ಫ್ರಂಟಿಯರ್‌ ಫೋರ್ಸ್‌ನ 24 ಯೋಧರ ಸಾವು
2010 ಏ. 6
ಛತ್ತೀಸ್‌ಗಡದ ದಂತೇವಾಡ ಜಿಲ್ಲೆ – 75 ಅರೆಸೇನಾ ಪಡೆಯ ಯೋಧರ ಸಾವು
2010 ಜೂ. 29
ಛತ್ತೀಸ್‌ಗಡದ ನಾರಾಯಣಪುರ ಜಿಲ್ಲೆ – 26 ಅರೆಸೇನಾ ಪಡೆಯ ಯೋಧರ ಸಾವು
2013ರ ಮೇ 25
ಛತ್ತೀಸ್‌ಗಡದ ದರ್ಬಾ ವ್ಯಾಲಿಯಲ್ಲಿ ಭೀಕರ ದಾಳಿ – ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರೂ ಸೇರಿ 25 ಪಕ್ಷದ ನಾಯಕರ ಹತ್ಯೆ
2014ರ ಮಾ. 11
ಛತ್ತೀಸ್‌ಗಡದ ಸುಖಾ¾ ಜಿಲ್ಲೆ – 15 ಭದ್ರತಾ ಸಿಬ್ಬಂದಿಯ ಸಾವು
2017ರ ಮಾ. 12
ಛತ್ತೀಸ್‌ಗಡದ ಸುಖಾ¾ ಜಿಲ್ಲೆ – 12 ಅರೆಸೇನಾ ಪಡೆಯ ಯೋಧರ ಸಾವು

Advertisement

Udayavani is now on Telegram. Click here to join our channel and stay updated with the latest news.

Next