ಜಮ್ಮು : ಜಮ್ಮು – ಪೂಂಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಡಲಾಗಿದ್ದ ಸುಧಾರಿತ ಸ್ಫೋಟಕವನ್ನು (ಐಇಡಿ) ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದ್ದು ಆ ಮೂಲಕ ಇಂದು ಸೋಮವಾರ ಭಾರೀ ದೊಡ್ಡ ಅನಾಹುತ ಸಂಭವಿಸುವುದನ್ನು ತಪ್ಪಿಸಲಾಗಿದೆ ಎಂದು ಅಧಿಕಾಗಳು ತಿಳಿಸಿದ್ದಾರೆ.
ಶಂಕಿತ ಐಇಡಿ ಸ್ಫೋಟಕ ಪತ್ತೆಯಾಗುತ್ತಲೇ ಜಮ್ಮು – ಪೂಂಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದೂವರೆ ತಾಸು ಕಾಲ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು.
ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಕಲ್ಲಾರ್ ಚೌಕ್ ಸಮೀಪ ರಸ್ತೆ ಬದಿಯಲ್ಲಿ ಗಟ್ಟಿ ವಸ್ತುಗಳಿದ್ದ ಒಂದು ಪಾಲಿ ಬ್ಯಾಗ್‌ಮತ್ತು ದ್ರಾವಣ ತುಂಬಿದ್ದ ಒಂದು ಬಾಟಲಿ ಪತ್ತೆಯಾಯಿತು ಎಂದು ರಾಜೋರಿ ಎಸ್‌ಎಸ್‌ಪಿ ಯೋಗಾಲ್ ಮನ್‌ಹಾಸ್ ತಿಳಿಸಿದರು.
ಬೆಳಗ್ಗೆ 7.30ರ ಸುಮಾರಿಗೆ ಇದನ್ನು ಗಮನಿಸಿದ ಸೇನಾ ಘಟಕ ತತ್‌ಕ್ಷಣ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿಕೊಂಡಿತು. ಆ ಬಳಿಕ ಕೂಡಲೇ ಸ್ಫೋಟಕವನ್ನು ಸ್ಥಳದಲ್ಲೇ ನಿಷ್ಕ್ರಿಯಗೊಳಿಸಲಾಯಿತು.
ಸೇನೆ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ ಒಡನೆಯೇ ಚಿಂಗೂಸ್ ಛತ್ಯಾರಿ ಪೊಲೀಸ್ ಪೋಸ್ಟ್ ಪ್ರಭಾರಿ ಮತ್ತು ಎಸ್ ಐ ಎಂ ಡಿ ಖಾನ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಬಂತು. ಅದಾಗಿ 10 ಗಂಟೆಯ ಸಮಾರಿಗೆ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ದೇಶ ವಿರೋಧಿ ಶಕ್ತಿಗಳು ಈ ಐಇಡಿಯನ್ನು ಇಟ್ಟಿರಬೇಕೆಂದು ಶಂಕಿಸಲಾಗಿದೆ.