ಬೆಂಗಳೂರು: ಪ್ರೀತಿಸಿ ಮದುವೆಯಾದ ಮಡದಿಯ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಶಹನಾಜ್ ಬೇಗಂ ಮೃತರು. ಇವರನ್ನು ಕೊಲೆಗೈದ ಆರೋಪ ಸಂಬಂಧ ಇವರ ಪತಿ, ತ್ರಿಪುರಾ ಮೂಲದ ಅಬ್ದುಲ್ ಹನ್ನಾನ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಅಬ್ದುಲ್ ಹನ್ನಾನ್ ಹಾಗೂ ಶಹನಾಜ್ ಬೇಗಂ, ನಗರದ ನ್ಯಾನಪ್ಪನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾರೆ. ಅಬ್ದುಲ್, ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದು, ಶಹನಾಜ್ ಮನೆಯಲ್ಲಿಯೇ ಇರುತ್ತಿದ್ದರು.
ಕೆಲ ತಿಂಗಳಿನಿಂದ ಪತ್ನಿಯ ಶೀಲದ ಬಗ್ಗೆ ವಿನಾಕಾರಣ ಅನುಮಾನ ಪಡುತ್ತಿದ್ದ ಅಬ್ದುಲ್, ಪರಪುರುಷನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ನಿಂದಿಸುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಸಂಬಂಧಿಕರು ರಾಜೀ ಸಂಧಾನ ಸಹ ನಡೆಸಿದ್ದರು.
ಭಾನುವಾರ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ ಅಬ್ದುಲ್, ಅನೈತಿಕ ಸಂಬಂದಧ ವಿಚಾರ ಪ್ರಸ್ತಾಪಿಸಿ ಶಹನಾಜ್ ಜತೆ ಜಗಳ ಆರಂಭಿಸಿದ್ದಾನೆ. ಈ ವೇಳೆ ತಾನು ಅನೈತಿಕ ಸಂಬಂಧ ಹೊಂದಿಲ್ಲ ಎಂದು ಶಹನಾಜ್ ವಾದಿಸಿದ್ದ. ಈ ಜಗಳ ತಾರಕಕ್ಕೇರಿ ಮನೆಯಲ್ಲಿದ್ದ ಚೂರಿಯಿಂದ ಅಬ್ದುಲ್, ಪತ್ನಿಯ ಕತ್ತು ಮತ್ತು ಬೆನ್ನಿಗೆ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಶಹನಾಜ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಚೂರಿ ಇರಿತದಿಂದ ಪತ್ನಿ ಮೃತಪಡುತ್ತಿದ್ದಂತೆ ಸಮೀಪದ ಮನೆಯಲ್ಲಿಯೇ ವಾಸವಿದ್ದ ಅತ್ತೆ ಮನೆಗೆ ತೆರಳಿದ ಅಬ್ದುಲ್, ಅತ್ತೆ ಹಾಗೂ ನಾದಿನಿ ಮೇಲೆ ಹಲ್ಲೆ ನಡೆಸಿ, ಅವರಿಗೂ ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ.
ಅವನಿಂದ ತಪ್ಪಿಸಿಕೊಂಡು ಅವರಿಬ್ಬರು, ಜೋರಾಗಿ ಕೂಗುತ್ತಾ ಆತಂಕದಿಂದ ಮಗಳ ಮನೆಗೆ ಬಂದಾಗ ಶಹನಾಜ್ ಕೊಲೆಯಾಗಿರುವುದು ಗೊತ್ತಾಗಿದೆ. ಈ ಕುರಿತು ಶಹನಾಜ್ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಅಬ್ದುಲ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.