Advertisement

ಮಹಿಳೆಯ ಬ್ಯಾಗ್‌ ನಲ್ಲಿ 8 ಜಿಂಕೆ ಕೊಂಬು ಪತ್ತೆ

05:45 AM Jul 27, 2018 | Karthik A |

ಮಂಗಳೂರು: ಅಮೆರಿಕಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ ನಲ್ಲಿ ಎಂಟು ಜಿಂಕೆ ಕೊಂಬುಗಳು ಪತ್ತೆಯಾದ ಪ್ರಕರಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯೊಬ್ಬರನ್ನು ವಿದೇಶಕ್ಕೆ ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಆಕೆಯ ತಂದೆಯ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮೆರಿಕ ಪ್ರಜೆಯಾಗಿರುವ ಕಾರ್ಕಳ ತಾಲೂಕಿನ ಹಿರ್ಗಾನದ ಮಹಿಳೆಯು ತಮ್ಮ ಮನೆಯಲ್ಲಿ ಆಲಂಕಾರಿಕ ವಸ್ತುವಾಗಿ ಇಟ್ಟುಕೊಳ್ಳಲು ಈ ಕೊಂಬುಗಳನ್ನು ಬ್ಯಾಗ್‌ ನೊಳಗೆ ಇಟ್ಟುಕೊಂಡಿದ್ದರು ಎನ್ನುವ ವಿಷಯ ಅರಣ್ಯ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

Advertisement

ಘಟನೆ ವಿವರ


ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನಿಂದ 56 ವರ್ಷದ ಮಹಿಳೆಯೊಬ್ಬರು ಇಂಡಿಗೊ ಸಂಸ್ಥೆಯ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ಅಲ್ಲಿಂದ ಅದೇ ದಿನ ಸಂಜೆ ಮತ್ತೂಂದು ವಿಮಾನದಲ್ಲಿ ಅಮೆರಿಕಕ್ಕೆ ತೆರಳುವವರಿದ್ದರು. ಆದರೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರ ಬ್ಯಾಗ್‌ ಅನ್ನು ವಿಮಾನ ಯಾನ ಸಂಸ್ಥೆಯ ಲಗೇಜು ಸ್ಕ್ಯಾನರ್‌ನಲ್ಲಿ ತಪಾಸಣೆ ನಡೆಸಿದಾಗ ಅನುಮಾನ ಬಂದಿತು. ಬ್ಯಾಗ್‌ ತೆರೆದು ಪರಿಶೀಲಿಸಿದಾಗ ಜಿಂಕೆಯ ಕೊಂಬುಗಳು ಸಿಕ್ಕಿದವು. ಕೂಡಲೇ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ, ‘ಇವು ಹಳೇ ಕಾಲದ್ದು. ಮನೆಯಲ್ಲಿ ಅಲಂಕಾರಕ್ಕೆ ಇಡಲು ಕೊಂಡೊಯ್ಯುತ್ತಿರುವೆ’ ಎಂದು ಹೇಳಿದ್ದರು.

ಆಕೆಯ ಮಾತನ್ನು ನಂಬಿದ ಅಧಿಕಾರಿಗಳು, ಕೊಂಬುಗಳನ್ನು ತಮ್ಮ ವಶಕ್ಕೆ ಪಡೆದು ಬೆಂಗಳೂರಿಗೆ ಪ್ರಯಾಣಿಸುವುದಕ್ಕೆ ಅನುಮತಿ ನೀಡಿದ್ದರು. ಆದರೆ, ಈ ಜಿಂಕೆ ಕೊಂಬುಗಳು ನಿಜವಾದದ್ದೇ ಅಥವಾ ಕೃತಕವಾದದ್ದೇ ಎನ್ನುವ ಅನುಮಾನವೂ ನಿಲ್ದಾಣದ ಸಿಬಂದಿಗೆ ಬಂದಿತು. ಹಾಗಾಗಿ ಕೂಡಲೇ ಮಂಗಳೂರು ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು. ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಕೊಂಬುಗಳನ್ನು ವಶಪಡಿಸಿಕೊಂಡರು.

ಕಾನೂನು ಮಾಹಿತಿ ಇಲ್ಲ
‘ಅಮೆರಿಕದಲ್ಲಿರುವ ನನ್ನ ಮಗಳಿಗೆ ಕೊಂಬುಗಳನ್ನು ಕಳುಹಿಸಿಕೊಡಲು ಅವಳ ಬ್ಯಾಗ್‌ ನಲ್ಲಿ ಇಡಲಾಗಿತ್ತು. ಆದರೆ ಈ ರೀತಿ ಕೊಂಡೊಯ್ಯುವುದು ಕಾನೂನು ಬಾಹಿರ ಎಂಬ ವಿಷಯ ತಮಗೆ ಗೊತ್ತಿರಲಿಲ್ಲ’ ಎಂದು ಅಧಿಕಾರಿಗಳ ಮುಂದೆ ಆ ಮಹಿಳೆಯ ತಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬಳಿ 8 ಜಿಂಕೆ ಕೊಂಬು ಪತ್ತೆಯಾಗಿದ್ದು, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ನಮ್ಮ ವಲಯದಲ್ಲಿ ಇಂಥ ಪ್ರಕರಣ ನಡೆದಿದ್ದು, ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಕ್ರಮ ಸಂಗ್ರಹ ಹಾಗೂ ಸಾಗಣೆ ಯತ್ನ ಸಂಬಂಧ ಆ ಮಹಿಳೆಯ ತಂದೆಯ ವಿರುದ್ಧ ಕೇಸು ದಾಖಲಿಸಲಾಗಿದೆ. ಎಲ್ಲ ಕೊಂಬುಗಳು ಸುಮಾರು 60-70 ವರ್ಷ ಹಳೆಯವು ಅನಿಸುತ್ತಿವೆ. ಬಹಳಷ್ಟು ಜನರು ತಮ್ಮ ಮನೆಯಲ್ಲಿ ಹಳೇ ಕಾಲದ ಜಿಂಕೆ ಕೊಂಬುಗಳನ್ನು ಆಲಂಕಾರಿಕ ವಸ್ತುವಾಗಿ ಇಟ್ಟುಕೊಂಡಿದ್ದು, ಕಾನೂನಿನಲ್ಲಿಯೂ ಅದಕ್ಕೆ ಅವಕಾಶವಿದೆ. ಆದರೆ, ಈ ಕುಟುಂಬ ಅವುಗಳನ್ನು ಇಲಾಖೆಯಡಿ ನೋಂದಣಿ ಮಾಡಿಸಿ ಅನುಮತಿ ಪಡೆದಿರಲಿಲ್ಲ. ಸಮಗ್ರ ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಗೊತ್ತಾಗಲಿದೆ’ ಎಂದು ತಿಳಿಸಿದ್ದಾರೆ.

Advertisement

ನೋಂದಣಿಯಾಗದಿದ್ದರೆ ಅಪರಾಧ
ಅರಣ್ಯ ಕಾಯ್ದೆ ಪ್ರಕಾರ, 1972ಕ್ಕೂ ಮೊದಲು (ಕಾಯ್ದೆ ಜಾರಿಗೂ ಮುನ್ನ) ದೊರೆತ ಅಥವಾ ವಶದಲ್ಲಿದ್ದ ಜಿಂಕೆ ಕೊಂಬುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಆದರೆ ಹಳೆಯ ಜಿಂಕೆ ಕೊಂಬುಗಳನ್ನು ಅರಣ್ಯ ಇಲಾಖೆಗೆ ಹಾಜರುಪಡಿಸಿ ದೃಢೀಕರಣ ಪತ್ರ ಪಡೆಯಬೇಕು. ಇಲ್ಲವಾದರೆ ಅಕ್ರಮ ಸಂಗ್ರಹ ಆರೋಪದಡಿ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಬಹುದು. ಈ ಕಾರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಅರಣ್ಯ ಇಲಾಖೆ ಪ್ರಕಟನೆ ನೀಡುತ್ತಿದೆ.

ಹಳೇ ಕಾಲದ ಕೊಂಬು?
ಅರಣ್ಯ ಇಲಾಖೆಯವರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್‌ 39ರಡಿ ಕಾರ್ಕಳದಲ್ಲಿ ನೆಲೆಸಿರುವ ಆಕೆಯ ತಂದೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆ ಬಳಿಕ, ಅಧಿಕಾರಿಗಳು ಹಿರ್ಗಾನದಲ್ಲಿರುವ ಅವರ ಮನೆಗೂ ಹೋಗಿ ತನಿಖೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಗೊತ್ತಾದ ಸಂಗತಿಯೆಂದರೆ, ಆ ಮನೆಯಲ್ಲಿ ಎಂಟು ಜಿಂಕೆ ಕೊಂಬುಗಳನ್ನು ಆಲಂಕಾರಿಕ ವಸ್ತುವಾಗಿ ಸುಮಾರು ವರ್ಷಗಳಿಂದ ಇಡಲಾಗಿತ್ತು. ಆದರೆ, ಅರಣ್ಯ ಕಾಯ್ದೆ ಪ್ರಕಾರ ಹೀಗೆ ಇಟ್ಟುಕೊಳ್ಳಲು ಇಲಾಖೆಯಿಂದ ಅನುಮತಿ ಪಡೆದಿರಬೇಕು. ಆದರೆ ಮನೆಯವರಲ್ಲಿ ಅನುಮತಿ ಪತ್ರ ಇರಲಿಲ್ಲ.

— ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next