ಹ್ಯೂಸ್ಟನ್ : ಕನ್ಸಾಸ್ ಪಬ್‌ನಲ್ಲಿ ಜನಾಂಗೀಯ ದ್ವೇಷದ ಕಿಚ್ಚಿನಲ್ಲಿ ಹೈದರಾಬಾದ್ ಟೆಕ್ಕಿಯನ್ನು ಗುಂಡಿಕ್ಕಿ ಹತ್ಯೆಗೈದು ಇನ್ನಿಬ್ಬರನ್ನು ತೀವ್ರವಾಗಿ ಗಾಯಗೊಳಿಸಿದ್ದ 51ರ ಹರೆಯದ ಅಮೆರಿಕದ ಮಾಜಿ ನೌಕಾ ಪಡೆ ಯೋಧ ಆ್ಯಡಂ ಪ್ಯುರಿಂಟಾನ್, ಈ ಪ್ರಕರಣದಲ್ಲಿ ಮೊದಲ ಬಾರಿಗೆ ಕೋರ್ಟ್‌ನಲ್ಲಿ ಹಾಜರಾಗಿದ್ದಾನೆ.
ಆರೋಪಿ ಪ್ಯುರಿಂಟಾನ್ ನಿನ್ನೆ ಸೋಮವಾರ ವಿಡಿಯೋ ಕಾನ್‌ಫರೆನ್ಸ್ ಮೂಲಕ ಜಾನ್‌ಸನ್ ಕೌಂಟಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾದ.
ಪ್ಯುರಿಂಟಾನ್ ಈಗ ಮೊದಲನೇ ಮಟ್ಟದ ಕೊಲೆ ಆರೋಪ ಮತ್ತು ಎರಡನೇ ಮಟ್ಟದ ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದು ಇವು ಸಾಬೀತಾದಲ್ಲಿ ಆತನಿಗೆ 50 ವರ್ಷಗಳ ಜೈಲು ಶಿಕ್ಷೆಯಾಗುವ ಸಂಭವವಿದೆ.
ಕನ್ಸಾಸ್‌ನ ಒಲಾಥೆಯಲ್ಲಿನ ಪಬ್ ಒಂದರಲ್ಲಿ ಕಳೆದ ಬುಧವಾರ ರಾತ್ರಿ ಪ್ಯುರಿಂಟಾನ್, ದ್ವೇಷದ ಕಿಚ್ಚಿನಲ್ಲಿ 32ರ ಹರೆಯದ ಶ್ರೀನಿವಾಸ ಕುಚಿಬೋಟ್ಲ ಎಂಬ ಭಾತೀಯ ಟೆಕ್ಕಿಯನ್ನು ಗುಂಡಿಕ್ಕಿ ಕೊಂದದ್ದಲ್ಲದೆ ಆಲೋಕ್ ಮದಸಾನಿ ಎಂಬ ಇನ್ನೋರ್ವ ಭಾರತೀಯ ಟೆಕ್ಕಿಯನ್ನು ಹಾಗೂ 24ರ ಹರೆಯದ ಅಮೆರಿಕನ್ ತರುಣ ಇಯಾನ್ ಗ್ರಿಲೋಟ್‌ನನ್ನು ತೀವ್ರವಾಗಿ ಗಾಯಗೊಳಿಸಿದ್ದ.
ಜಾನ್ಸನ್ ಕೌಂಟಿ ಪಬ್ಲಿಕ್ ಡಿಫೆಂಡರ್ ಕಾರ್ಯಾಲಯದ ಮಿಚೆಲ್ ಡ್ಯುರೆಟ್ ಅವರು ಪ್ಯುರಿಂಟಾನ್ ನ ವಕೀಲರಾಗಿ ವಾದಿಸಲಿದ್ದಾರೆ.
ಈ ನಡುವೆ ಅಮೆರಿಕದ ಶ್ವೇತಭವನವು ಇದೇ ಮೊದಲ ಬಾರಿಗೆ, ದ್ವೇಷದ ಕಿಚ್ಚಿನಲ್ಲಿ ನಡೆದ ಕುಚಿಬೋಟ್ಲ ಹತ್ಯೆ ಕುರಿತಾಗಿ ತನ್ನ ಮೌನವನ್ನು ಮುರಿದ, “ಆರಂಭಿಕ ವರದಿಗಳು ಆಘಾತಕಾರಿಯಾಗಿವೆ’ ಎಂದು ಹೇಳಿದೆ.