ಕಾಠ್ಮಂಡು: ನೇಪಾಲದಲ್ಲಿ ಸಂಭವಿಸಿದ್ದ ಭೀಕರ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸೇರಿದಂತೆ ಎಲ್ಲಾ 22 ಪ್ರಯಾಣಿಕರು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ(ಮೇ 30) ತಿಳಿಸಿದ್ದಾರೆ.
ಇದನ್ನೂ ಓದಿ:ಈತ ಮಸಾಲೆ ರುಬ್ಬುವುದು,ಮೊಬೈಲ್ ಚಾರ್ಜ್ ಇಡುವುದು ಮೆಸ್ಕಾಂ ಆಫೀಸಲ್ಲೇ! ಏನಿದು ಪ್ರತಿಭಟನೆ
ವಿಮಾನ ದುರಂತರದಲ್ಲಿ ಮಹಾರಾಷ್ಟ್ರದ ಥಾಣೆಯ ಒಂದೇ ಕುಟುಂಬದ ನಾಲ್ವರು ಸಹಿತ 22 ಮಂದಿ ಪ್ರಯಾಣಿಕರು ಮೃತ ಪಟ್ಟಿರುವುದಾಗಿ ಶಂಕಿಸಲಾಗಿದೆ. ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ. ಆದರೆ ಈ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಬೇಕಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರ ಫದೀಂದ್ರ ಮಣಿ ಪೊಖ್ರೇಲ್ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ಹೇಳಿದೆ.
ನೇಪಾಲದ ಮುಸ್ಟಾಂಗ್ ಜಿಲ್ಲೆಯ ಮನಾಪತಿ ಹಿಮಲ್ ಎಂಬ ಗುಡ್ಡಗಾಡು ಪ್ರದೇಶದಲ್ಲಿ ವಿಮಾನ ಪತನಗೊಂಡಿತ್ತು. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎಂದು ವರದಿ ತಿಳಿಸಿದೆ.
ವಿಮಾನ ಪತನಗೊಂಡು ಸುಮಾರು 20 ಗಂಟೆಗಳ ನಂತರ ಘಟನೆ ನಡೆದ ಸ್ಥಳವನ್ನು ಪತ್ತೆಹಚ್ಚಲಾಗಿತ್ತು. ನೇಪಾಲದ ಪೊಖ್ರಾದಿಂದ ಜೊಮ್ಸಮ್ ಎಂಬಲ್ಲಿಗೆ ಬೆಳಗ್ಗೆ 9.55ಕ್ಕೆ ಪ್ರಯಾಣ ಬೆಳೆಸಿದ ವಿಮಾನ, ಕೆಲವೇ ನಿಮಿಷಗಳಲ್ಲಿ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಯ ರಾಡಾರ್ ಸಂಪರ್ಕ ಕಡಿದುಕೊಂಡಿತ್ತು.