ಹೊಸದಿಲ್ಲಿ : ಕೇಂದ್ರ ಸರಕಾರ ಇಂದು ಮಂಗಳವಾರ ಪಾಸ್ ಪೋರ್ಟ್ ಸೇವಾ ಆ್ಯಪ್ ಬಿಡುಗಡೆಗೊಳಿಸಿದೆ. ಇದರ ಪರಿಣಾಮವಾಗಿ ಪಾಸ್ ಪೋರ್ಟ್ ಪಡೆಯುವುದು ಈಗ ಅರ್ಜಿದಾರರಿಗೆ ಇನ್ನಷ್ಟು ಸುಲಭವಾಗಿದೆ.
ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರಿಂದು “ಪಾಸ್ ಪೋರ್ಟ್ ಸೇವಾ ದಿವಸ್’ ಅಂಗವಾಗಿ ಪಾಸ್ ಪೋರ್ಟ್ ಸೇವಾ ಆ್ಯಪ್ ಬಿಡುಗಡೆಗೊಳಿಸಿ ಪಾಸ್ ಪೋರ್ಟ್ ಪಡೆಯುವುದು ಈ ಆ್ಯಪ್ ಮೂಲಕ ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಿದರು.
ಅರ್ಜಿದಾರರ ಈಗಿನ್ನು ಪಾಸ್ ಪೋರ್ಟ್ ಸೇವಾ ಆ್ಯಪ್ ಮೂಲಕ, ದೇಶದ ಯಾವುದೇ ಭಾಗದಲ್ಲಿದ್ದು ಕೊಂಡು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನು ಪೂರೈಸಿ ಸುಲಭದಲ್ಲಿ ಪಾಸ್ ಪೋರ್ಟ್ ಪಡೆಯಬಹುದಾಗಿದೆ ಎಂದು ಸಚಿವ ಸುಶ್ಮಾ ಹೇಳಿದರು. ಸಭೆಯಲ್ಲಿ ಹಲವು ಪಾಸ್ ಪೋರ್ಟ್ ಸೇವಾ ಕೇಂದ್ರಗಳ ಅಧಿಕಾರಿಗಳು ಮತ್ತು ವಿದೇಶ ವ್ಯವಹಾರಗಳ ಸಚಿವಾಲಯದ ಸದಸ್ಯರು ಉಪಸ್ಥಿತರಿದ್ದರು.
“ಇದೊಂದು ಪಾಸ್ ಪೋರ್ಟ್ ಕ್ರಾಂತಿ’ ಎಂದು ವರ್ಣಿಸಿದ ಸಚಿವೆ ಸುಶ್ಮಾ, ಹೆಚ್ಚು ಸರಳೀಕೃತವಾಗಿರುವ ಹೊಸ ಪಾಸ್ ಪೋರ್ಟ್ ನಿಯಮಗಳಿಂದಾಗಿ ಹಜ್ ಯಾತ್ರೆ ಕೈಗೊಳ್ಳುವ ಸಾವಿರಾರು ಭಾರತೀಯ ಪ್ರಜೆಗಳಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಹೇಳಿದರು.