ನಾನು ಇಂಥಾದ್ದೊಂದು ಕ್ಷಣ ನನ್ನ ಜೀವನದಲ್ಲಿ ಬರಬೇಕು ಎಂದು ಕನಸು ಕಂಡಿದ್ದೆ. ಅದೀಗ ಈಡೇರಿದೆ. ಜೀವಮಾನದ ದೊಡ್ಡ ಕನಸು ಈಡೇರಿದ ಈ ಹೊತ್ತಿನಲ್ಲಿ ಅದಕ್ಕೆ ಕಾರಣರಾದ ನಿಮಗೆ ಧನ್ಯವಾದಗಳು’- ಎಂದು 370ನೇ ವಿಧಿಯನ್ನು ರದ್ದು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ ಎರಡ್ಮೂರು ಗಂಟೆಗಳಲ್ಲೇ ಅಭಿನಂದನೆ ಸಲ್ಲಿಸಿದವರು ನಮ್ಮನ್ನು ತೊರೆದು ಪರಲೋಕ ಸೇರಿದರು. ಆ ಕನಸು ಸಾಕಾರವಾದ ಖುಷಿಯಲ್ಲೇ ಅವರು ನಮ್ಮನ್ನು ತೊರೆದು ಹೋಗಬೇಕಾಗಿ ಬಂದುದು ಬೇಸರದ ಸಂಗತಿ. ಇದು ದೇಶಕಂಡ ಮಾದರಿ ನಾಯಕಿ ಸುಷ್ಮಾ ಸ್ವರಾಜ್ ಬಗೆಗಿನ ಒಂದು ಮಾತು.
ದೇಶ ಕಂಡ ಅತ್ಯಪರೂಪದ ಮಹಿಳಾ ರಾಜಕಾರಣಿಗಳ ಸಾಲಿನಲ್ಲಿ ಮಿಂಚುತ್ತಿದ್ದ ಸುಷ್ಮಾ ಸ್ವರಾಜ್ ಗಾಢನಿದ್ರೆಗೆ ಸರಿದಾಗ ಇಡೀ ವಿಶ್ವವೇ ಒಂದು ಕ್ಷಣ ದಂಗಾಗಿದೆ. ಭಾರತದಲ್ಲಂತೂ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಬಹುತೇಕ ಮಂದಿಗೆ ಕಷ್ಟವಾಯಿತು. ಅದಕ್ಕೆ ಕಾರಣ ಆಕೆ ಹೊಂದಿದ್ದ ಪಕ್ಷಾತೀತ ಸಂಬಂಧ, ಗಳಿಸಿದ್ದ ಅಪಾರ ಜನಪ್ರೀತಿ.
ಹಿರಿಯ ನಾಯಕ ಎಲ್. ಕೆ. ಆಡ್ವಾಣಿ, ಪ್ರಧಾನಿ ನರೇಂದ್ರ ಮೋದಿಯವರ ಕಣ್ಣಲ್ಲೂ ನೀರು ಜಿನುಗುವಂತೆ ಮಾಡಿದ್ದ ಸುಷ್ಮಾ ಸಾವು ನಮಗೆ ದೊಡ್ಡ ನಷ್ಟವೇ. ಆಕೆ ಒಂದು ಸಂಸಾರದೊಳಗೆ ಮಹಿಳೆಯ ಪಾತ್ರ ಹೇಗಿರಬೇಕು ಎಂಬುದರಲ್ಲಿಂದ ಹಿಡಿದು ನಾಯಕಿಯಾಗಿ, ರಾಜಕಾರಣಿಯಾಗಿ ಮಹಿಳೆ ಹೇಗೆ ಮಿಂಚಬಲ್ಲಳು ಎಂಬುದನ್ನೂ ತೋರಿಸಿಕೊಟ್ಟ ದಿಟ್ಟೆ. ವಿದೇಶಾಂಗ ವ್ಯವಹಾರ ಖಾತೆಯನ್ನು ನಿಭಾಯಿಸಿದ ಬಳಿಕ ಆಕೆ ಗಳಿಸಿಕೊಂಡ ಜನಪ್ರೀತಿ, ಜಾಗತಿಕ ಮಟ್ಟದ ಖ್ಯಾತಿಗೆ ಆಕೆಯ ಕಾರ್ಯಶೈಲಿಯೇ ಕಾರಣ. ಒಂದು ಟ್ವೀಟ್ನಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ರೀತಿ, ಅಧಿಕಾರದಿಂದ ಕೆಳಗಿಳಿದ ಬಳಿಕವೂ ತನಗಿದ್ದ ವೈಯಕ್ತಿಕ ವರ್ಚಸ್ಸನ್ನು ಬಳಸಿಕೊಂಡು ಆಕೆ ಜನರಿಗೆ ಮಾಡುತ್ತಿದ್ದ ಸಹಾಯ ಮೆಚ್ಚತಕ್ಕದ್ದೇ ಆಗಿತ್ತು.
ಅಪ್ಪಟ ಭಾರತೀಯ ನಾರಿಯ ಉಡುಗೆಯಲ್ಲಿ ಆಕೆ ವಿಶ್ವ ಸುತ್ತಿದ್ದು, ಕೆಲವೇ ಕೆಲವು ದಿನಗಳಲ್ಲಿ ಕರ್ನಾಟಕದಲ್ಲಿದ್ದುಕೊಂಡು ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ಭಾಷಣ ಮಾಡುತ್ತಿದ್ದುದು, ಬಳ್ಳಾರಿಯಲ್ಲಿ ವರಮಹಾಲಕ್ಷ್ಮೀ ಪೂಜೆಯ ಮೂಲಕ ಸಮಸ್ತ ಕನ್ನಡಿಗರ ಮನೆ ಮಾತಾಗಿದ್ದು, ಅಸ್ಖಲಿತ ಮಾತುಗಳ ಮೂಲಕ ಲೋಕಸಭೆಯಲ್ಲಿ ತನ್ನ ಪಕ್ಷವನ್ನು ಸಮರ್ಥಿಸುತ್ತಿದ್ದುದು- ಇವೆಲ್ಲವೂ ಆಕೆಯನ್ನು ಜನನಾಯಕಿ ಪಟ್ಟಕ್ಕೆ ತಂದು ನಿಲ್ಲಿಸಿತ್ತು. ಒಂದು ಕಾಲದಲ್ಲಿ ಈಕೆಯೇ ಪ್ರಧಾನಿ ಅಭ್ಯರ್ಥಿ ಎಂಬ ಮಟ್ಟಕ್ಕೆ ಬೆಳೆದು ನಿಂತಿದ್ದರು. ಬಿಜೆಪಿಯಲ್ಲಿದ್ದುಕೊಂಡು ಮುಸ್ಲಿಮರ ಬೆಂಬಲವನ್ನೂ ದೊಡ್ಡ ಸಂಖ್ಯೆಯಲ್ಲಿ ಪಡೆದುಕೊಂಡಿದ್ದ ಸುಷ್ಮಾ ಸ್ವರಾಜ್ ಯಾವತ್ತೂ ಕಟ್ಟಾ ಹಿಂದೂವಾದಿ ಆಗಿರಲೇ ಇಲ್ಲ. ಆದರೆ, ದೇಶಭಕ್ತಿ ಮತ್ತು ಪಕ್ಷನಿಷ್ಠೆಯ ವಿಷಯ ಬಂದಾಗ ರಾಜಿಯಾಗುತ್ತಲೇ ಇರಲಿಲ್ಲ.
ಸರಿಸುಮಾರು 25ನೇ ವರ್ಷದಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಸುಷ್ಮಾ ಸಾಗಿಬಂದ ದಾರಿ ಅಪಾರ. ಮುಖ್ಯಮಂತ್ರಿಯಾಗಿ, ರಾಜ್ಯಪಾಲೆಯಾಗಿ, ಕೇಂದ್ರ ಸಚಿವೆಯಾಗಿ ಆಕೆಯ ಸಾಧನೆ ಎಲ್ಲರಲ್ಲೂ ಬೆರಗು ಮೂಡಿಸಿತ್ತು. ಸೋನಿಯಾ ಗಾಂಧಿ ಪ್ರಧಾನಿಯಾದರೆ ‘ತಲೆ ಬೋಳಿಸುತ್ತೇನೆ’ ಎಂದು ಹೇಳಿದ್ದ ಹೇಳಿಕೆಯೊಂದು ಸಾಕಷ್ಟು ಟೀಕೆಗೆ ಒಳಗಾಗಿದ್ದರೂ ಅದರಲ್ಲಡಗಿದ್ದ ದೇಶಪ್ರೇಮದ ಪರಿಮಳ ಬಂದಾಗ ಅದರ ರೂಪವೇ ಬದಲಾಗಿತ್ತು. ಹಾಗಿದ್ದರೂ ಸೋನಿಯಾ ಗಾಂಧಿ ಜತೆಗೆ ಸಂಬಂಧ ಕೆಡಿಸಿಕೊಂಡಿರಲಿಲ್ಲ. ಎದುರಿಗೆ ಸಿಕ್ಕಿದವರನ್ನೆಲ್ಲ ಪ್ರೀತಿಯಿಂದ ಆಲಂಗಿಸಿಕೊಳ್ಳುತ್ತಿದ್ದ ಕಾರಣದಿಂದಲೇ ಎಲ್ಲರಿಂದಲೂ ಅಮ್ಮಾ ಎಂದು ಕರೆಯಲ್ಪಟ್ಟಿದ್ದರು.
ಅವರ ಮಾತು ಅತ್ಯಂತ ಸ್ಪಷ್ಟ. ಅವರು ಮಾತಾಡಿದ ಬಳಿಕ ಪ್ರಶ್ನೆ ಗಳಿಗೆ ಅವಕಾಶವಿರುತ್ತಿರಲಿಲ್ಲ. ಎಲ್ಲರಿಗೂ ಮನದಟ್ಟಾಗುವಂತೆ ಸಾಕ್ಷಿ ಸಹಿತ ಮಾತನಾಡುತ್ತಿದ್ದ ಅವರು ಬಿಜೆಪಿ ಪಾಲಿಗೆ ದೊಡ್ಡ ಶಕ್ತಿಯೇ ಆಗಿದ್ದರು. ತನ್ನ ವಿರುದ್ಧ ಲಲಿತ್ ಮೋದಿ ಪ್ರಕರಣದಲ್ಲಿ ಹಾಗೂ ರೆಡ್ಡಿ ವಿಷಯದಲ್ಲಿ ಆರೋಪ ಕೇಳಿ ಬಂದಾಗಲೂ ಸಮರ್ಥವಾಗಿ ಎದುರಿಸಿ ಸಂಶಯ ನಿವಾರಿಸಿದ್ದರು. ಆದ್ದರಿಂದ ಆಕೆಯ ಮೇಲೆ ಆರೋಪ ಹೊರಿಸುವ ಮೊದಲು ಸಾವಿರ ಬಾರಿ ಚಿಂತಿಸಬೇಕು ಎಂದು ವಿಪಕ್ಷಗಳು ಹೇಳುತ್ತಿದ್ದವು.
ಒಂಟಿಯಾದರು ಸ್ವರಾಜ್
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದಾಗ ಇಡೀ ದೇಶದ ಜನರು ಬೇಸರಗೊಂಡಿದ್ದರೂ, ಸುಷ್ಮಾರ ಗಂಡ ಸ್ವರಾಜ್ ಕೈಲಾಶ್ ಮಾತ್ರ ಸಂತೋಷಪಟ್ಟಿದ್ದರು. ದೀರ್ಘ ಕಾಲದ ದಾಂಪತ್ಯದಲ್ಲಿ ಪತ್ನಿಯು ದೊಡ್ಡ ಜವಾಬ್ದಾರಿಯ ಕಾರಣಗಳಿಂದ ಕೌಟುಂಬಿಕವಾಗಿ ಒಂದಷ್ಟು ಸಮಸ್ಯೆ ಎದುರಿಸುತ್ತಿದ್ದರು. ಅದರ ಪರಿಣಾಮ ಗಂಡನ ಮೇಲೂ ಆಗುತ್ತಿತ್ತು. ಸುತ್ತಾಟದಲ್ಲೇ ಜೀವನ ಸವೆಸುತ್ತಿದ್ದರು. ಆದ್ದರಿಂದ ಸಕ್ರಿಯ ರಾಜ ಕಾರಣದಿಂದ ದೂರವಿರಲು ನಿರ್ಧರಿಸಿದಾಗ ಗಂಡ ಸಂತೋಷಪಟ್ಟಿದ್ದರು. ಇನ್ನಾದರೂ ಪತ್ನಿ ಮನೆಯಲ್ಲೇ ಇರುತ್ತಾಳಲ್ಲಾ, ಜತೆಯಾಗಿ ಇರಬಹುದಲ್ಲ ಎಂಬುದೇ ಆ ಸಂತೋಷಕ್ಕೆ ಕಾರಣವಾಗಿತ್ತು. ಆದರೆ, ಅದು ದೀರ್ಘ ಕಾಲ ಉಳಿಯಲಿಲ್ಲ. ವಿಧಿ ಬಯಸಿದ್ದು ಬೇರೆಯೇ ಇತ್ತು.
ಕಿಡ್ನಿದಾನಕ್ಕೆ ಮುಂದಾದವರೆಷ್ಟೊ!
ಕಿಡ್ನಿ ಕಸಿಗೆ ಒಳಗಾಗಬೇಕಾಗಿ ಬಂದ ಸುಷ್ಮಾ ಸ್ವರಾಜ್‌ಗೆ ಕಿಡ್ನಿದಾನ ಮಾಡಲು ಮುಂದಾಗಿದ್ದ ಅಭಿಮಾನಿ ವರ್ಗವನ್ನು ಗಮನಿಸಿದಾಗ ನಮಗೆ ಆಶ್ಚರ್ಯವಾಗದೆ ಇರುವುದಿಲ್ಲ. ಮುಸ್ಲಿಮರು ಸೇರಿದಂತೆ ದೊಡ್ಡ ಸಂಖ್ಯೆಯ ಮಂದಿ ನಾಮುಂದು ತಾಮುಂದು ಎಂದು ಆಕೆಗೆ ಕಿಡ್ನಿ ಕೊಡಲು ಮುಂದೆ ಬಂದಿದ್ದರು. ಇವೆಲ್ಲವೂ ಆಕೆಯ ಮೇಲೆ ಇದ್ದಂಥ ಪ್ರೀತಿಗೆ ಸಾಕ್ಷಿ.
ಸುಷ್ಮಾ ಸ್ವರಾಜ್ ದೇಶದ ಮಹಿಳೆಯರಿಗೆ ಮಾದರಿಯಾಗಿದ್ದರು. ಅವರನ್ನು ಪ್ರೀತಿಸುವ, ಆರಾಧಿಸುವ ಮಹಿಳೆಯರ ಸಂಖ್ಯೆ ಅಪಾರ. ಈಗ ಅವರು ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ವಾಸ್ತವ ಎಂಬುದನ್ನು ಒಪ್ಪಿಕೊಳ್ಳುವುದು ಅನಿವಾರ್ಯ.
ಪುತ್ತಿಗೆ ಪದ್ಮನಾಭ ರೈ