Advertisement

ಶಿಂಧೆ ರಾಜಕೀಯ ಭವಿಷ್ಯಕ್ಕೆ ಪ್ರಕಾಶ್‌ ಅಂಬೇಡ್ಕರ್‌ ಬರೆ ಎಳೆದರೆ ?

04:29 PM May 26, 2019 | Vishnu Das |

ಮುಂಬಯಿ: 77ರ ಹರೆಯದ ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಶಿಂಧೆ ಅವರ ಸತತ ಎರಡನೆಯ ಸೋಲು ಅವರ ದೀರ್ಘ‌ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆಯಿಟ್ಟಂತಾಗಿರುವುದಲ್ಲದೆ, ಸತತ ಸೋಲಿನಿಂದಲೇ ರಾಜಕೀಯ ಭವಿಷ್ಯಕ್ಕೆ ವಿದಾಯ ಹೇಳಿದಂತಾಗಿದೆ.

Advertisement

ಲೋಕಸಭೆ ಚುನಾವಣೆಯಲ್ಲಿ 1.55 ಲಕ್ಷ ಮತಗಳಿಂದ ಹೀನಾಯವಾಗಿ ಸೋಲುಂಡ ಕಾಂಗ್ರೆಸ್‌ ಹಿರಿಯ ನಾಯಕ ಗೆಲುವಿಗಾಗಿ ಹರಸಾಹಸ ಪಟ್ಟಿರುವುದಂತೂ ಸುಳ್ಳಲ್ಲ. ಸುಶೀಲ್‌ ಕುಮಾರ್‌ ಶಿಂಧೆ ಅವರು 3,62,329 ಮತಗಳನ್ನು ಪಡೆದರೆ, ಬಿಜೆಪಿಯ ವಿಜೇತ ಸ್ಪರ್ಧಿ ಕನ್ನಡಿಗ, ಡಾ| ಜಯಸಿದ್ಧೇಶ್ವರ ಸ್ವಾಮೀಜಿಯವರು 5,05,132 ಮತಗಳನ್ನು ಪಡೆಯುವ ಮೂಲಕ 1,50,138 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸೊಲ್ಲಾಪುರ ಮೀಸಲು ಮತಕ್ಷೇತ್ರದಿಂದ ಸ್ಪರ್ಧಿಸಿದ ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿ ಪ್ರಕಾಶ್‌ ಅಂಬೇಡ್ಕರ್‌ ಅವರು 1,63,870 ಮತಗಳನ್ನು ಪಡೆದುಕೊಂಡಿರುವುದರಿಂದ ಸುಶೀಲ್‌ ಕುಮಾರ ಶಿಂಧೆ ಅವರು ಸುಲಭವಾಗಿ ಸೋಲುಂಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಬಹು ತೇಕವಾಗಿ ದಲಿತ ಮತ್ತು ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್‌ನ್ನಾಗಿ ಪರಿವರ್ತಿಸಿಕೊಂಡ ಕಾಂಗ್ರೆಸ್‌ಗೆ ಪ್ರಕಾಶ್‌ ಅಂಬೇಡ್ಕರ್‌ ಅವರು ವಿರುದ್ಧವಾಗಿ ನಿಂತಿರುವುದು ಸುಶೀಲ್‌ ಕುಮಾರ್‌ ಶಿಂಧೆ ಅವರ ರಾಜಕೀಯ ಭವಿಷ್ಯಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ.

ಬಿಜೆಪಿ, ಕಾಂಗ್ರೆಸ್‌ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷ ಸೇರಿದಂತೆ ಮೂವರು ಅಭ್ಯರ್ಥಿಗಳ ಮಧ್ಯೆ ಪೈಪೋಟಿ ನಡೆದಿದ್ದು, ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆ ರಂಗೇರಿತ್ತು. 2014ರ ಸೋಲಿನಿಂದ ಪಾಠ ಕಲಿತಿರುವ ಶಿಂಧೆ ಅವರು ಹಲವಾರು ಸವಾಲುಗಳು ಎದುರಿಸಿ ತಮ್ಮ ಹಣಬಲ ಮತ್ತು ಜನಬಲದಿಂದ ಪ್ರತಿ ಮತದಾರರನ್ನು ತಲ ಪಲು ಪ್ರಯತ್ನಿಸಿದ್ದರು.

ಶಿಂಧೆ ಅವರು ಸೊಲ್ಲಾಪುರ ಕ್ಷೇತ್ರದಲ್ಲಿ ಸುಮಾರು 27 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎನ್‌ಟಿಪಿಸಿ, ಪವರ್‌ ಗ್ರಿಡ್‌ ಹಾಗೂ ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅದನ್ನೆ ಮುಂದಿಟ್ಟಕೊಂಡು ಶಿಂಧೆ ಅವರು ಪ್ರಚಾರ ಕಾರ್ಯ ಕೈಗೊಂಡಿದ್ದರು. ಶಿಂಧೆ ಅವರು ತಮ್ಮ ಸೋಲಿನ ಭಯದಿಂದ ಪ್ರಚಾರ ಸಭೆಗಳಲ್ಲಿ ಪದೆ ಪದೇ ಇದು ನನ್ನ ಕೊನೆಯ ಚುನಾವಣೆಯಾಗಿದೆ ಎಂದು ಹೇಳುತ್ತಿದ್ದರು.

Advertisement

ಲಿಂಗಾಯಿತ ಸಮುದಾಯದಿಂದ ಬಂದ ಡಾ| ಶಿವಾಚಾರ್ಯರನ್ನು ಕಣಕ್ಕಿಳಿಸುವುದರ ಮೂಲಕ ಬಿಜೆಪಿ ಶಿಂಧೆ ವಿರುದ್ಧ ಪ್ರಬಲವಾದ ಸವಾಲನ್ನು ಹುಟ್ಟುಹಾಕಿತು. 63 ವರ್ಷ ವಯಸ್ಸಿನ ಆಧ್ಯಾತ್ಮಿಕ ನಾಯಕ ಡಾ| ಶಿವಾಚಾರ್ಯರು ಮಠಗಳನ್ನು ನಡೆಸುತ್ತಿದ್ದಾರೆ. ಲಿಂಗಾಯಿತರು ಈ ಮಠಗಳಿಗೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಜಿಲ್ಲೆಯ ಉಸ್ತುವಾರಿ ಸಚಿವ ವಿಜಯ್‌ ದೇಶು¾ಖ್‌ ಮತ್ತು ಸಹಕಾರ ಸಚಿವ ಸುಭಾಷ್‌ ದೇಶು¾ಖ್‌ ಅವರು ಸಕ್ರಿಯವಾಗಿ ಮತಬೇಟೆಯಲ್ಲಿ ತೊಡಗಿರುವುದು ಲಿಂಗಾಯತ ಮತ್ತು ಮರಾಠಾ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಶಿವಾಚಾರ್ಯ ಮತ್ತು ಅಂಬೇಡ್ಕರ್‌ ಅವರ ಪ್ರವೇಶದೊಂದಿಗೆ ಹಿಂದುಳಿದ ಸೀಟುಗಳನ್ನು ಸೆಳೆಯುವ ಬೆಳವಣಿಗೆಯ ವಿಷಯಗಳ ನಡುವೆಯೂ ಸ್ಪರ್ಧೆ ಏರ್ಪಟ್ಟಿತ್ತು. ಇಡೀ ಚುನಾವಣೆಯು ನಿಜವಾದ ವಿಷಯಗಳಿಗಿಂತ ಜಾತಿ-ಧರ್ಮಗಳ ಮೇಲೆ ಹೋರಾಟ ನಡೆಸಿರುವುದು ಸುಳ್ಳಲ್ಲ ಎಂದು ರಾಜಕೀಯ ವಿಶ್ಲೇಷಕರಾದ ಅವಿನಾಶ್‌ ಕುಲಕರ್ಣಿ ತಿಳಿಸಿದದ್ದಾರೆ. ಈ ಎಲ್ಲಾ ಬೆಳವಣಿಗೆಯು ಹಿರಿಯ ನಾಯಕ ಸುಶೀಲ್‌ ಕುಮಾರ್‌ ಶಿಂಧೆ ಅವರ ರಾಜಕೀಯ ಭವಿಷ್ಯಕ್ಕೆ ಕುತ್ತು ತಂದಿರುವುದಂತೂ ನಿಜ.

Advertisement

Udayavani is now on Telegram. Click here to join our channel and stay updated with the latest news.

Next