ಮಹಾರಾಷ್ಟ್ರ: ನಾನು ಯಾವತ್ತೂ ಅಸ್ಪ್ರಶ್ಯತೆ ನಿವಾರಣೆಗಾಗಿ ದುಡಿದ ಸಾವರ್ಕರ್ ಅವರನ್ನು ಗೌರವಿಸುತ್ತೇನೆ. ಹಿಂದುಳಿದ ಸಮುದಾಯದವನಾದ ನನಗೆ ಪತಿತ್ ಪಾವನ್ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ಸಿಕ್ಕಿದೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಅಭಿಪ್ರಾಯವ್ಯಕ್ತಪಡಿಸಿರುವ ವಿಡಿಯೋವನ್ನು ಪಿಟಿಐ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ದಲಿತ ಸಮುದಾಯದಲ್ಲಿ ಹುಟ್ಟಿದ ನನಗೆ ಅಸ್ಪ್ರಶ್ಯತೆಗಾಗಿ ಹೋರಾಡಿದ ಸಾವರ್ಕರ್ ಬಗ್ಗೆ ಅಭಿಮಾನವಿದೆ. ಆದರೆ ಅವರ ಕಾರ್ಯದ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿಲ್ಲ ಎಂದರು. ಶಿಂಧೆ ಯಾರನ್ನೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ ಸಾವರ್ಕರ್ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದರು.
ಮಹಾತ್ಮ ಗಾಂಧಿ ಹತ್ಯೆ ಘಟನೆಯಲ್ಲಿ ಸಾವರ್ಕರ್ ಶಾಮೀಲಾಗಿದ್ದಾರೆಂಬ ಆರೋಪದ ಮೇಲೆ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಬೆಂಬಲಿಗರು ಸದಾ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಮಣಿಶಂಕರ್ ಅಯ್ಯರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾವರ್ಕರ್ ವಿಚಾರದಲ್ಲಿ ಅಪಸ್ವರ ಎತ್ತುತ್ತಲೇ ಬಂದಿರುವುದಾಗಿ ವರದಿ ತಿಳಿಸಿದೆ.
ಲಾಲ್ ಚೌಕ್ ಗೆ ಹೋಗಲು ಭಯಪಟ್ಟಿದ್ದೆ:
ನಾನು ಕೇಂದ್ರ ಸಚಿವನಾಗಿದ್ದ ಸಂದರ್ಭದಲ್ಲಿ ಶ್ರೀನಗರದ ಲಾಲ್ ಚೌಕ್ ಗೆ ಹೋಗಲು ಭಯಪಟ್ಟಿದ್ದೆ. ಆ ವೇಳೆ ಉಗ್ರರ ಅಟ್ಟಹಾಸ ವಿಪರೀತವಾಗಿತ್ತು ಎಂದು ಸುಶೀಲ್ ಕುಮಾರ್ ಶಿಂಧೆ ಹಳೆಯ ನೆನಪನ್ನು ಮೆಲುಕು ಹಾಕಿದ್ದರು.