ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಅವರ ಫೋನ್‌ನಿಂದ ಪೊಲೀಸ್ ತುರ್ತು ಸೇವೆಗೆ ಕೊನೆಯ ಕರೆ ಬಂದಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಮುಂಬಯಿ ಪೊಲೀಸರು ಅವರ ಕೊನೆಯ ಫೋನ್ ಕರೆ ಸ್ನೇಹಿತರಿಗೆ ಹೋಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ದಿಶಾ ಸಾಲ್ಯಾನ್ ಅವರು ಸಾವನ್ನಪ್ಪುವ ಮೊದಲು ಅವರ ಫೋನ್‌ನಿಂದ ಕೊನೆಯ ಕರೆ ಅವರ ಸ್ನೇಹಿತೆ ಅಂಕಿತಾಗೆ ಮಾಡಿದ್ದಾರೆ. ಕೊನೆಯ ಬಾರಿಗೆ 100 ಅನ್ನು ಡಯಲ್ ಮಾಡಲು ಪ್ರಯತ್ನಿಸಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ಮುಂಬಯಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಶಾ ಸಾಲ್ಯಾನ್ ಅವರ ಸಾವಿನ ಸುತ್ತ ಹಲವಾರು ವದಂತಿಗಳು ಮತ್ತು ವರದಿಗಳು ಹರಿದಾಡುತ್ತಿವೆ. ಆತ್ಮಹತ್ಯೆ ಘಟನಾ ಸ್ಥಳದಲ್ಲಿ ಆಕೆಯ ಶವವನ್ನು ಪೊಲೀಸ್ ತಂಡ ಬೆತ್ತಲೆಯಾಗಿ ಪತ್ತೆ ಮಾಡಿದೆ ಎಂಬ ವರದಿಗಳನ್ನು ಮುಂಬಯಿ ಪೊಲೀಸರು ಇತ್ತೀಚೆಗೆ ನಿರಾಕರಿಸಿದ್ದರು. ಬಳಿಕ ದಿಶಾ ಸಾಲ್ಯಾನ್ ಅವರ ತಂದೆ ಮುಂಬಯಿಯ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಲಿಖೀತ ದೂರು ದಾಖಲಿಸಿದ್ದರು.
14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿಲ್ಲ:
ಕಳೆದ ತಿಂಗಳು ಬಿಜೆಪಿ ಮುಖಂಡ ನಾರಾಯಣ್ ರಾಣೆ ಮಾತನಾಡಿ, ದಿಶಾ ಸಾಲ್ಯಾನ್ ಅವರು ಕಟ್ಟಡದ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಅತ್ಯಚಾರಗೈದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಏತನ್ಮಧ್ಯೆ ದಿಶಾ ಸಾಲ್ಯಾನ್ ಅವರ ಸಾವಿನ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯ ಸಿಬಿಐ ತನಿಖೆಗಾಗಿ ಪಿಐಎಲ್ ಯನ್ನು ಸುಪ್ರೀಂ ಕೋರ್ಟ್ ನಲ್ಲಿ ದಾಖಲಿಸಲಾಗಿದ್ದು, ಆಕೆಯ ಸಾವು ಸುಶಾಂತ್
ಅವರ ಸಾವಿನೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದಿದೆ.