ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನಿಜವಾದ ಕಾರಣ ಏನು ಎಂದು ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳನ್ನು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಏಮ್ಸ್ (ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ತಂಡ ಸೋಮವಾರ (ಸೆಪ್ಟೆಂಬರ್ 28, 2020) ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಏಮ್ಸ್ ನ ನಾಲ್ವರ ವೈದ್ಯರ ತಂಡ ಇಂದು ದೆಹಲಿಯಲ್ಲಿರುವ ಸಿಬಿಐ ಮುಖ್ಯ ಕಚೇರಿಗೆ ಭೇಟಿ ನೀಡಿತ್ತು. ತಂಡ ಸುಶಾಂತ್ ಸಾವಿಗೆ ಸಂಬಂಧಿಸಿದ ವಿಧಿವಿಜ್ಞಾನ ವರದಿಯನ್ನು ಸಿಬಿಐಗೆ ಹಸ್ತಾಂತರಿಸಿದ ನಂತರ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿರುವುದಾಗಿ ವರದಿ ಹೇಳಿದೆ. ಮೂಲಗಳ ಪ್ರಕಾರ ಸಿಬಿಐ ಈಗ ವರದಿಯ ವಿಶ್ಲೇಷಣೆ ನಡೆಸಲಿದೆ ಎಂದು ತಿಳಿಸಿದೆ.
ಆಗಸ್ಟ್ ನಲ್ಲಿ ಸುಶಾಂತ್ ಸಾವಿನ ಪ್ರಕರಣದ ತನಿಖೆ ಕೈಗೆತ್ತಿಕೊಂಡ ನಂತರ ಸಿಬಿಐ ತಂಡ ಕೂಪರ್ ಆಸ್ಪತ್ರೆ ಸಿದ್ದಪಡಿಸಿದ್ದ ಮರಣೋತ್ತರ ಪರೀಕ್ಷೆಯ ವರದಿಯ ಬಗ್ಗೆ ಅಧ್ಯಯನ ನಡೆಸುವಂತೆ ಏಮ್ಸ್ ವಿಧಿವಿಜ್ಞಾನ ತಂಡದ ಸಹಾಯ ಯಾಚಿಸಿತ್ತು. ಸುಶಾಂತ್ ಸಾವಿನ ಪ್ರಕರಣದಲ್ಲಿ ಯಾವುದೇ ದಿಕ್ಕುತಪ್ಪಿಸುವ ನಾಟಕ ಆಡಲಾಗಿತ್ತೇ ಎಂಬುದನ್ನು ಪತ್ತೆ ಹಚ್ಚಲು ಕ್ರೈಂ ಸನ್ನಿವೇಶವನ್ನು ಮರುಸೃಷ್ಟಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: #CoupleChallenge #SingleChallenge ಚಿತ್ರಗಳ ದುರ್ಬಳಕೆ: ಮೈಮರೆಯದೆ ಇರಲಿ ಎಚ್ಚರ
ಏಮ್ಸ್ ವಿಧಿವಿಜ್ಞಾನ ತಂಡ ಮೆಡಿಕಲ್ ಮಂಡಳಿಯನ್ನು ರಚಿಸಿ, ಸುಶಾಂತ್ ಸಿಂಗ್ ಸಾವಿಗೆ ಶರಣಾಗಿದ್ದ ಫ್ಲ್ಯಾಟ್ ಗೆ ಮಾಹಿತಿ ಕಲೆ ಹಾಕಲು ಕಳುಹಿಸಿತ್ತು. ಅಲ್ಲದೇ ಸುಶಾಂತ್ ಸಾವಿನ ಪ್ರಕರಣವನ್ನು ಎನ್ ಸಿಬಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡಾ ತನಿಖೆ ನಡೆಸುತ್ತಿದ್ದಾರೆ.
ತನಿಖೆಯ ಬೆಳವಣಿಗೆ ಬಗ್ಗೆ ಎನ್ ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾ ಕೂಡಾ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ದೆಹಲಿಯಿಂದ ಭಾನುವಾರ ಮುಂಬೈಗೆ ಆಗಮಿಸಿದ್ದು, ಎನ್ ಸಿಬಿ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ರೈಲ್ವೆ ಪ್ರಯಾಣ ಎಸಿ, ಸ್ಲೀಪರ್ ಕ್ಲಾಸ್ ಟಿಕೆಟ್ ದರ ದುಬಾರಿ ಸಾಧ್ಯತೆ?