ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಇದೀಗ ಲಭ್ಯವಾಗಿರುವ ಹೊಸ ಸಾಕ್ಷ್ಯದ ಆಧಾರದಲ್ಲಿ ಮುಖ್ಯವಾದ ಕೊಂಡಿ ಸಿಕ್ಕಂತಾಗಿದೆ ಎಂದು ವರದಿ ತಿಳಿಸಿದೆ.
ಡ್ರಗ್ಸ್ ಚಟಕ್ಕೆ ದಾಸರಾಗಿದ್ದರೆ ಸುಶಾಂತ್, ರಿಯಾ ಮತ್ತು ಗೆಳೆಯರು?
ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಾಟ್ಸಪ್ ಚಾಟ್ಸ್ ನ ಮೂಲಕ ತಿಳಿದು ಬಂದಿರುವ ಪ್ರಕಾರ ಇದೊಂದು ಡ್ರಗ್ ವಹಿವಾಟಿನ ಸಂಚು ಎಂಬ ಶಂಕೆ ಬಲವಾಗುತ್ತಿದ್ದು, ಡ್ರಗ್ಸ್ ಬಗ್ಗೆ ಚಾಟ್ಸ್ ಮಾಡಿರುವ ರಿಯಾ ಸಂಭಾಷಣೆಯ ತಮಗೆ ಲಭ್ಯವಾಗಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ.
ರಿಯಾ ಡಿಲೀಟ್ ಮಾಡಿರುವ ಚಾಟ್ಸ್ ನ ಮೂಲ ಪತ್ತೆಹಚ್ಚುವ ಮೂಲಕ ಬಹಳಷ್ಟು ಅಂಶ ಬೆಳಕಿಗೆ ಬಂದಿದೆ. ಮೊದಲ ಚಾಟ್ ರಿಯಾ ಮತ್ತು ಗೌರವ್ ಆರ್ಯ ನಡುವೆ ನಡೆದಿದ್ದು, ಆರ್ಯ ಡ್ರಗ್ ಮಾರಾಟಗಾರರನಾಗಿದ್ದ ಎಂಬುದಾಗಿ ವರದಿ ವಿವರಿಸಿದೆ.
ಚಾಟ್ ನಲ್ಲಿ ತಿಳಿಸಿರುವ ಪ್ರಕಾರ, ನಾವೀಗ ಹಾರ್ಡ್ (ವಿಪರೀತ ಅಮಲಿನ) ಡ್ರಗ್ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಆ ನಂತರ ನಾವು ಅದನ್ನು ಹೆಚ್ಚಾಗಿ ಬಳಸಲಿಲ್ಲ ಎಂಬ ಸಂದೇಶವನ್ನು ರಿಯಾ 2017ರ ಮಾರ್ಚ್ 8ರಂದು ಗೌರವ್ ಗೆ ಕಳುಹಿಸಿರುವ ತಿಳಿಸಿದ್ದಳು.
ಎರಡನೇ ಚಾಟ್ ಕೂಡಾ ರಿಯಾ ಮತ್ತು ಗೌರವ್ ನಡುವೆ ನಡೆದಿದ್ದು, ಈ ಪ್ರಕಾರ ರಿಯಾ ಗೌರವ್ ಬಳಿ ಕೇಳಿದ್ದು, ನಿಮ್ಮಲ್ಲಿ ಎಂಡಿ ಇದೆಯಾ?(ಅಂದರೆ ಮೆಥಿಲೀನ್ ಡಯಾಕ್ಸಿ ಮೆಧಾಂಫೆಟಮೈನ್ ಡ್ರಗ್) ಇದೊಂದು ತುಂಬಾ ಸ್ಟ್ರಾಂಗ್ ಆದ ಡ್ರಗ್ ಎಂದು ವರದಿ ವಿಶ್ಲೇಷಿಸಿದೆ.
ಅಷ್ಟೇ ಅಲ್ಲ ಸಾಮ್ಯುಯೆಲ್ ಮಿರಾಂಡಾ ಮತ್ತು ರಿಯಾ ನಡುವೆ ನಡೆದ ಚಾಟ್ ಕೂಡಾ ಲಭ್ಯವಾಗಿರುವುದಾಗಿ ಜೀ ನ್ಯೂಸ್ ತಿಳಿಸಿದ್ದು, ಮಿರಾಂಡಾ ಚಾಟ್ಸ್ ನಲ್ಲಿ, ಹಾಯ್ ರಿಯಾ…ನಮ್ಮ ಸತ್ವ(ಡ್ರಗ್ಸ್) ಬಹುತೇಕ ಮುಗಿದು ಹೋಗಿದೆ. ಇದು 2020ರ ಏಪ್ರಿಲ್ 17ರಂದು ರಿಯಾ ಮತ್ತು ಸಾಮ್ಯುಯೆಲ್ ನಡುವೆ ನಡೆದ ಸಂಭಾಷಣೆ.
ನಂತರ ನಾವು ಶೋವಿಕ್ ಫ್ರೆಂಡ್ ಬಳಿ ಡ್ರಗ್ಸ್ ತೆಗೆದುಕೊಳ್ಳುವಾ? ಎಂಬುದಾಗಿ ಮಿರಾಂಡಾ ರಿಯಾ ಬಳಿ ಚಾಟ್ ನಲ್ಲಿ ಕೇಳಿದ್ದ. ಆದರೆ ಆತನ ಬಳಿ ಹ್ಯಾಶ್ ಮತ್ತು ಬಡ್ ಮಾತ್ರವೇ ಇದೆ. ಇಲ್ಲಿ ಹ್ಯಾಶ್ ಮತ್ತು ಬಡ್ ಅಂದರೆ ಕಡಿಮೆ ಅಮಲಿನ ಡ್ರಗ್ಸ್ ಪದಾರ್ಥ!
ಸುಶಾಂತ್ ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ(ಇಡಿ) ಕೂಡಾ ಡ್ರಗ್ಸ್ ಗೆ ಸಂಬಂಧಿಸಿದಂತೆ ನಡೆಸಿದ ವಾಟ್ಸಪ್ ಚಾಟ್ ನ ವಿವರನ್ನು ಬಹಿರಂಗಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಕೂಡಾ ರಿಯಾ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಹಂಚಿಕೊಳ್ಳಲು ಇ.ಡಿ (ಜಾರಿ ನಿರ್ದೇಶನಾಲಯ) ಜತೆ ಕೈಜೋಡಿಸಲಿದೆ ಎಂದು ತಿಳಿಸಿದೆ.
ತನಿಖೆಯ ವೇಳೆ ಜಾರಿ ನಿರ್ದೇಶನಾಲಯ ರಿಯಾಳ ಮೊಬೈಲ್ ಫೋನ್ ಗಳು ಹಾಗೂ ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿತ್ತು. ಇದಕ್ಕೂ ಮುನ್ನ ಸುಶಾಂತ್ ಸಿಂಗ್ ರಜಪೂತ್ ಸಾಯುವ ಮುನ್ನ ದುಬೈ ಮೂಲದ ಡ್ರಗ್ ಡೀಲರ್ ಅನ್ನು ಭೇಟಿಯಾಗಿರುವುದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಏತನ್ಮಧ್ಯೆ ರಿಯಾ ಪರ ವಕೀಲ ಸತೀಶ್ ಮಾನ್ ಶಿಂಧೆ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ನಟಿ ರಿಯಾ ತನ್ನ ಜೀವನದಲ್ಲಿ ಯಾವತ್ತೂ ಡ್ರಗ್ಸ್ ಸೇವಿಸಿಲ್ಲ. ಯಾವುದೇ ಸಮಯದಲ್ಲಿಯೂ ರಿಯಾ ರಕ್ತ ಪರೀಕ್ಷೆಗೆ ಸಿದ್ಧ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ನಂತರ ಮುಂಬೈ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಆದರೆ ಎಫ್ ಐಆರ್ ಐ ದಾಖಲಿಸಿಕೊಂಡಿಲ್ಲವಾಗಿತ್ತು. ಇದೊಂದು ಆಕಸ್ಮಿಕ ಸಾವು ಎಂದು ತನಿಖೆ ನಡೆಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದರು. ಇದೀಗ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.