ಬಸೆಟರ್ (ಸೇಂಟ್ ಕಿಟ್ಸ್): ಆರಂಭಿಕನ ಜವಾಬ್ದಾರಿಯನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿದ ಸೂರ್ಯಕುಮಾರ್ ಯಾದವ್, ವೆಸ್ಟ್ ಇಂಡೀಸ್ ಎದುರಿನ 3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು ತಂದಿತ್ತಿದ್ದಾರೆ.
165 ರನ್ ಗುರಿ ಪಡೆದ ಭಾರತ 19 ಓವರ್‌ಗಳಲ್ಲಿ ಮೂರೇ ವಿಕೆಟ್ ನಷ್ಟದಲ್ಲಿ ಇದನ್ನು ಸಾಧಿಸಿತು. ಸೂರ್ಯಕುಮಾರ್ ಗಳಿಕೆ 76 ರನ್. 44 ಎಸೆತಗಳ ಈ ಪಂದ್ಯಶ್ರೇಷ್ಠ ಆಟದಲ್ಲಿ 8 ಫೋರ್ ಹಾಗೂ 4 ಸಿಕ್ಸರ್ ಸೇರಿತ್ತು. ಇದು ವೆಸ್ಟ್ ಇಂಡೀಸ್ ವಿರುದ್ಧ ಅವರದೇ ನೆಲದಲ್ಲಿ ಭಾರತದ ಆಟಗಾರ ದಾಖಲಿಸಿದ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ.
ಈ ಜಯದೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಸರಣಿಯ ಉಳಿದೆರಡು ಪಂದ್ಯಗಳು ಶನಿವಾರ ಮತ್ತು ರವಿವಾರ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆಯಲಿವೆ.
ನಾಯಕ ರೋಹಿತ್ ಶರ್ಮ 11 ರನ್ ಗಳಿಸಿದ ವೇಳೆ ಗಾಯಾಳಾಗಿ ಅಂಗಳ ತೊರೆದ ಬಳಿಕ ಸೂರ್ಯಕುಮಾರ್ ಯಾದವ್ ತಂಡದ ರಕ್ಷಣೆಗೆ ನಿಂತರು. ಅವರಿಗೆ ಶ್ರೇಯಸ್ ಅಯ್ಯರ್ (24) ಉತ್ತಮ ಬೆಂಬಲವಿತ್ತರು. ಸ್ಕೋರ್ 12 ಓವರ್‌ಗಳಲ್ಲಿ 105ಕ್ಕೆ ಏರಿತು. ಆಗ ಅಯ್ಯರ್ ವಿಕೆಟ್ ಬಿತ್ತು. ಸೂರ್ಯಕುಮಾರ್ 15ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡರು. ಇವರಿಬ್ಬರ ನಿರ್ಗಮನದ ಬಳಿಕ ರಿಷಭ್ ಪಂತ್ ಅಜೇಯ 33 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ತಂಡವನ್ನು ದಡ ಮುಟ್ಟಿಸಿದರು. ಹಾರ್ದಿಕ್ ಪಾಂಡ್ಯ ಕೇವಲ 4 ರನ್ ಮಾಡಿದರೆ, ರವೀಂದ್ರ ಜಡೇಜ ಬದಲು ಅವಕಾಶ ಪಡೆದ ದೀಪಕ್ ಹೂಡಾ ಅಜೇಯ 10 ರನ್ ಹೊಡೆದರು.
ಇದು ಬಸೆಟರ್ ಅಂಗಳದಲ್ಲಿ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್‌ನ ನೂತನ ದಾಖಲೆ. ಅಫ್ಘಾನಿಸ್ಥಾನ ವಿರುದ್ಧದ 2017ರ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ 147 ರನ್ ಚೇಸ್ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-5 ವಿಕೆಟಿಗೆ 164 (ಮೇಯರ್ 73, ಪೂರಣ್ 22, ಕಿಂಗ್ 20, ಹೆಟ್‌ಮೈರ್ 20, ಭುವನೇಶ್ವರ್ 35ಕ್ಕೆ 2, ಪಾಂಡ್ಯ 19ಕ್ಕೆ 1). ಭಾರತ-19 ಓವರ್‌ಗಳಲ್ಲಿ 3 ವಿಕೆಟಿಗೆ 165 (ಸೂರ್ಯಕುಮಾರ್ 76, ಪಂತ್ ಔಟಾಗದೆ 33, ಅಯ್ಯರ್ 24, ಅಖೀಲ್ 28ಕ್ಕೆ 1). ಪಂದ್ಯಶ್ರೇಷ್ಠ: ಸೂರ್ಯಕುಮಾರ್ ಯಾದವ್.