ಹೈದರಾಬಾದ್: ಮೂರನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಸೂರ್ಯಕುಮಾರ್ ಯಾದವ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರನ್ನು ಹೊಗಳಿದವರ ಸಾಲಿನಲ್ಲಿ ಆಸ್ಟ್ರೇಲಿಯದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಕೂಡ ಸೇರಿದ್ದಾರೆಂಬುದು ವಿಶೇಷ.
“ಸೂರ್ಯಕುಮಾರ್ ಯಾದವ್ ಭಾರತದ ಹೊಸ ಬ್ಯಾಟಿಂಗ್ ಶಕ್ತಿಯಾಗಿ ಮೂಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಅವರು ಅತ್ಯಂತ ಅಪಾಯಕಾರಿಯಾಗಿ ಗೋಚರಿಸುವುದರಲ್ಲಿ ಅನುಮಾನವಿಲ್ಲ’ ಎಂಬುದಾಗಿ ಮೆಕ್‌ಡೊನಾಲ್ಡ್ ಹೇಳಿದರು.
“ಭಾರತೀಯರ ಬ್ಯಾಟಿಂಗ್ ಕೌಶಲದಿಂದಾಗಿ ಆಸ್ಟ್ರೇಲಿಯದ ಬೌಲಿಂಗ್ ತೀರಾ ಸಾಮಾನ್ಯವಾಗಿ ಕಂಡಿತು. ಆದರೆ ಮಿಚೆಲ್ ಸ್ಟಾರ್ಕ್ ಮರಳಿದ ಬಳಿಕ ನಮ್ಮ ಬೌಲಿಂಗ್ ಆಕ್ರಮಣ ಲಯ ಕಂಡುಕೊಳ್ಳಲಿದೆ’ ಎಂದರು.
“ರವೀಂದ್ರ ಜಡೇಜ ಗೈರಿನಿಂದ ಭಾರತ ತಂಡ ದುರ್ಬಲಗೊಳ್ಳಿಲಿದೆ ಎಂದು ನಾವು ಭಾವಿಸಿದ್ದೆವು. ಆದರೆ ಅಕ್ಷರ್ ಪಟೇಲ್ ಸಮರ್ಥವಾಗಿ ಈ ಸ್ಥಾನ ತುಂಬುವ ಸೂಚನೆ ನೀಡಿದ್ದಾರೆ. ಸರಣಿಯಲ್ಲಿ ಸ್ಥಿರವಾದ ಬೌಲಿಂಗ್ ತೋರ್ಪಡಿಸಿದ್ದು ಅಕ್ಷರ್ ಮಾತ್ರ’ ಎಂದರು.
“ವಾರ್ನರ್ ಗೈರಲ್ಲಿ ಇನ್ನಿಂಗ್ಸ್ ಆರಂಭಿಸುವ ಸವಾಲು ಸ್ವೀಕರಿಸಿದ ಕ್ಯಾಮರಾನ್ ಗ್ರೀನ್ ಈ ಸರಣಿಯ ಆಕರ್ಷಣೆ ಎನಿಸಿದರು’ ಎಂಬುದಾಗಿ ಮೆಕ್‌ಡೊನಾಲ್ಡ್ ಹೇಳಿದರು.