Advertisement

ಸೂರ್ಯದೇವ ನಮಗೆಲ್ಲ ಜೀವಾಧಾರ, ಜೀವನಾಧಾರ

08:20 PM Feb 02, 2020 | Lakshmi GovindaRaj |

ತುಮಕೂರು: ಸೂರ್ಯ ನಮಗೆಲ್ಲ ಜೀವಾಧಾರ ಮತ್ತು ಜೀವನಾಧಾರ. ಸೂರ್ಯ ಇಲ್ಲದಿದ್ದರೆ ಯಾವ ಜೀವರಾಶಿಯೂ ಬದುಕಲು ಸಾಧ್ಯವಿಲ್ಲ ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಸೂರ್ಯನ ಉಪಸ್ಥಿತಿ ನಮ್ಮಲ್ಲಿ ಸಂಚಲನ ಉಂಟು ಮಾಡುತ್ತದೆ. ಇಂಥ ಶಕ್ತಿ ಸೂರ್ಯನ ಕಿರಣದಲ್ಲಿದೆ. ಸೂರ್ಯ ನಮ್ಮೆಲ್ಲರ ಚೈತನ್ಯಧಾಮ. ಸೂರ್ಯ ನಮಗೆ ಆರೋಗ್ಯಕಾರಕ. ಸೂರ್ಯ ಆರೋಗ್ಯಕಾರಕ.

ಸೂರ್ಯ ಇರುವೆಡೆ ಆರೋಗ್ಯ ಇರುತ್ತದೆ. ಇಲ್ಲದಿದ್ದರೆ ಅನಾರೋಗ್ಯ ಇರುತ್ತದೆ. ದೈನಂದಿನದಲ್ಲಿ ಮೊದಲು ಸೂರ್ಯನಿಗೆ ನಮಸ್ಕಾರ ಸಲ್ಲಬೇಕು ಎಂದು ಹೇಳಿದರು. ರಥಸಪ್ತಮಿ ಸೂರ್ಯನ ಸುತ್ತಮುತ್ತ ಜರುಗುವ ಸೂರ್ಯ ಕೇಂದ್ರಿತ ಹಬ್ಬ. ಉತ್ತರಾಯಣಕಾಲವನ್ನು ಪುಣ್ಯ ಕಾಲ ಎಂದು ಕರೆಯುತ್ತೇವೆ. ರಥಸಪ್ತಮಿಗೆ ಪರ್ವ ಕಾಲ ಎಂದು ಕರೆಯುತ್ತೇವೆ. ಇದು ಪ್ರಥಮ ಪರ್ವ. ಇದನ್ನು ಮಾಘ ಸಪ್ತಮಿ ಎಂದೂ ಕರೆಯಲಾಗುತ್ತದೆ. ಶುಕ್ಲಪಕ್ಷ ಮಾಘ ಮಾಸದ 7ನೇ ದಿನ ರಥಸಪ್ತಮಿ ಹಬ್ಬ ನಡೆಯುತ್ತದೆ ಎಂದು ತಿಳಿಸಿದರು.

ಸೂರ್ಯನಿಗೆ ರಥ ಬದಲಾಯಿಸುವುದು, ಪಥ ಬದಲಾಯಿಸುವುದಷ್ಟೇ ಗೊತ್ತು. ಪಕ್ಷ ಬದಲಾಯಿಸುವ ಕೆಲಸ ಗೊತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮೈ ಮೇಲೆ ಸೂರ್ಯನ ರಶ್ಮಿ ಬೀಳಬೇಕು. ಉತ್ತಮ ಗಾಳಿ ಸೇವಿಸಬೇಕು. ಇದನ್ನು ನಾವ್ಯಾರೂ ಮಾಡುತ್ತಿಲ್ಲ. ಹಾಗಾಗಿ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮಾಡಬೇಕು ಎಂದು ಸಲಹೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಯೋಗ ಪ್ರತಿಯೊಬ್ಬರೂ ಬದುಕಿನಲ್ಲಿ ಸಾರ್ಥಕತೆ ತಂದು ಕೊಡುತ್ತದೆ. ಜತೆಗೆ ಉತ್ತಮ ಆರೋಗ್ಯಕ್ಕೂ ಸಹಕಾರಿ. ಯೋಗದ ಮಹತ್ವ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತ ಸಂಚಾಲಕ ತ್ಯಾಗರಾಜು ಮಾತನಾಡಿ, ಸೂಯೊಲ್ಲಂಘನ ಮಾಡಿದ ಅಪಕೀರ್ತಿ ಮನುಷ್ಯನಿಗೆ ಸಲ್ಲುತ್ತದೆ. ಆದರೆ ಪ್ರಾಣಿಗಳು ಸೂಯೊದಯದೊಂದಿಗೆ ಕೆಲಸ ಆರಂಭಿಸುತ್ತವೆ. ಸೂರ್ಯಾಸ್ತಮದೊಂದಿಗೆ ಕೆಲಸ ಮುಗಿಸುತ್ತವೆ ಎಂದು ಹೇಳಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತೃತ್ವದಲ್ಲಿ ನೂರಾರು ಮಂದಿ ಯೋಗಬಂಧುಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು.

Advertisement

ಸೂರ್ಯದೇವನಿಗೆ ವಿಶೇಷ ಸ್ಥಾನ
ತುಮಕೂರು: ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನ ನೀಡಿದ್ದು, ಬೆಳಗ್ಗೆ ಎದ್ದು ನಮಿಸಿದರೆ ದಿನದ ಚಟುವಟಿಕೆ ಉತ್ತಮ ರೀತಿಯಲ್ಲಿ ಇರುತ್ತದೆ ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ನಗರದ ಅಮಾನೀಕೆರೆ ಮುಂಭಾಗ ಶ್ರೀ ರಾಮನಗರ ಗೆಳೆಯರ ಬಳಗ, ಧನ್ವಂತರಿ ಯೋಗ ಸಂಸ್ಥೆಯಿಂದ ರಥಸಪ್ತಮಿ ಅಂಗವಾಗಿ ಸೂರ್ಯದೇವನಿಗೆ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ಮಾಡಿದವನಿಗೆ ಯಾವುದೇ ರೋಗ ಹರಡುವುದಿಲ್ಲ. ಯೋಗದಲ್ಲಿ ಪ್ರಮುಖವಾಗಿ ಬರುವುದೇ ಸೂರ್ಯ ನಮಸ್ಕಾರ ಎಂದು ಹೇಳಿದರು. ಶ್ರೀ ರಾಮನಗರ ಗೆಳೆಯರ ಬಳಗದ ಅಧ್ಯಕ್ಷ ಬಿ.ಎಲ್‌ ರವೀಂದ್ರ ಕುಮಾರ್‌, ಧನ್ವಂತರಿ ಯೋಗ ಕೇಂದ್ರದ ಯೋಗಗುರು ರಶ್ಮಿ ಮಾತನಾಡಿದರು. ಡಾ.ಕೆ.ಎಸ್‌ ರಾಜಶೇಖರ್‌, ಡಾ.ಹಿರೇಮಠ, ಡಾ.ಮುರುಳಿಧರ್‌, ಎಸ್‌.ವಿ ವೆಂಕಟೇಶ್‌, ಸ್ಪೂರ್ತಿ ಡೆವಲಪರ್ಸ್‌ನ ಚಿದಾನಂದ್‌, ಕಿರಣ್‌, ಚಂದ್ರು, ಬಸವರಾಜ್‌, ಕರಿಯಪ್ಪ ಸೇರಿದಂತೆ ಹಲವರು ಇದ್ದರು.

ಯೋಗದಿಂದ ಆರೋಗ್ಯಕರ ಜೀವನ
ತುಮಕೂರು: ಯೋಗಾಭ್ಯಾಸದಿಂದ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ ಎಂದು ವಾಗ್ಮಿ ಹಾಗೂ ಯೋಗಪಟು ಎಂ.ಕೆ.ನಾಗರಾಜ್‌ ತಿಳಿಸಿದರು. ನಗರದ ಅನನ್ಯ ಇನ್‌ಸ್ಟಿಟ್ಯೂಟ್‌ ಆಫ್ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್ಮೇಂಟ್‌ನ ಕಾಲೇಜಿನ ಆವರಣದಲ್ಲಿ ರಥಸಪ್ತಮಿಯ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗಾಭ್ಯಾಸದಿಂದ ದೀರ್ಘ‌ಕಾಲ ಆರೋಗ್ಯವಾಗಿ ಬಾಳಬಹುದು ಎಂದರು. ಅನನ್ಯ ಸಂಸ್ಥೆ ಟ್ರಸ್ಟಿ ಡಾ.ಎಚ್‌. ಹರೀಶ್‌ ಮಾತನಾಡಿ, ಯೋಗಭ್ಯಾಸ ಬದುಕುವ ಕಲೆ ಕಲಿಸುತ್ತದೆ ಎಂದು ತಿಳಿಸಿದರು. ಪ್ರಾಂಶುಪಾಲ ಡಾ.ಎಂ.ವಿಶ್ವಾಸ್‌ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next