Advertisement
ಇದಕ್ಕೆ ಪುಷ್ಠಿ ನೀಡುವಂತೆ, ‘ವಿಟಮಿನ್ ಸ್ತ್ರೀ’ ಎಂಬ ಯೂ ಟ್ಯೂಬ್ ಚಾನೆಲ್ ನಮ್ಮ ದೇಶದ ನಗರ ಪ್ರದೇಶಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿತ್ತು. ಈ ಸಮೀಕ್ಷೆಯಿಂದ ಹೊರಬಿದ್ದ ಮಾಹಿತಿಗಳು ಬಹಳ ಕುತೂಹಲಕರವಾಗಿತ್ತು ಮಾತ್ರವಲ್ಲದೇ ಇವತ್ತಿನ ವಿದ್ಯಾರ್ಥಿ ಸಮುದಾಯ ಮತ್ತು ಯುವಸಮೂಹ ಯಾವ ರೀತಿಯಲ್ಲಿ ಅಂತರ್ಜಾಲ ಮಾಧ್ಯಮ ಪ್ರಭಾವಕ್ಕೊಳಪಟ್ಟಿದೆ ಎಂಬ ಅಂಶವನ್ನೂ ಇದು ಹೊರಗೆಡಹಿದೆ. ಈ ಸಮೀಕ್ಷೆಯಿಂದ ಹೊರಬಿದ್ದ ಒಂದು ಕುತೂಹಲಕಾರಿ ಮಾಹಿತಿಯೆಂದರೆ ನಮ್ಮ ದೇಶದ ನಗರ ಪ್ರದೇಶಗಳಲ್ಲಿ ವಾಸಿಸುವ ಅಪ್ರಾಪ್ತರಲ್ಲಿ 46 ಪರ್ಸಂಟೇಜ್ ಜನ ತಮ್ಮ 13ನೇ ವರ್ಷದಲ್ಲಿಯೇ ‘ಸೆಕ್ಸ್’ ವಿಚಾರಗಳ ಕುರಿತು ತಿಳಿದುಕೊಂಡಿರುತ್ತಾರೆ ಎಂಬುದು. ಇಷ್ಟು ಮಾತ್ರವಲ್ಲದೇ ಇನ್ನೊಂದು ಆತಂಕಕಾರಿ ವಿಚಾರವೆಂದರೆ ಇವರಲ್ಲಿ ಹೆಚ್ಚಿನ ಸಂಖ್ಯೆಯ ಅಪ್ರಾಪ್ತರು ತಾವು ಅಸುರಕ್ಷಿತ ಲೈಂಗಿಕ ಚಟುವಟಿಕೆಗಳನ್ನು ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು, ನಗರ ಪ್ರದೇಶದಲ್ಲಿರುವ 50 ಪ್ರತಿಶತದಷ್ಟು ಅಪ್ರಾಪ್ತರು 14 ರಿಂದ 18 ವರ್ಷ ಪ್ರಾಯದಲ್ಲೇ ತಮ್ಮ ಲೈಂಗಿಕ ಪಾವಿತ್ರ್ಯತೆಯನ್ನು (ವರ್ಜಿನಿಟಿ) ಕಳೆದುಕೊಳ್ಳುತ್ತಿದ್ದಾರೆ ಎಂಬ ಅಂಶವೂ ಈ ಸಮೀಕ್ಷೆಯಿಂದ ಬಯಲಾಗಿದೆ.ಇನ್ನು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಪಠ್ಯಕ್ರಮವನ್ನು ಅಳವಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿಯು (NCERT) ಸದ್ಯದಲ್ಲಿಯೇ ಪರಿಷ್ಕೃತ ಪಠ್ಯಕ್ರಮವನ್ನು ಪರಿಚಯಿಸಲಾಗುವುದು ಎಂದು ಜೂನ್ 2018ರಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಎಲ್ಲಾ ಅಂಶಗಳನ್ನು ಅವಲೋಕಿಸಿದಾಗ ನಮ್ಮ ದೇಶದ ಅಪ್ರಾಪ್ತ ವಯಸ್ಸಿನವರ ಮೇಲೆ ಅಂತರ್ಜಾಲ ಮತ್ತು ಬದಲಾಗಿರುವ ಸಾಮಾಜಿಕ ಸನ್ನಿವೇಶಗಳು ಬಹಳಷ್ಟು ಪ್ರಭಾವವನ್ನು ಬೀರುತ್ತಿವೆ ಎಂಬ ಅಂಶ ಸ್ಪಷ್ಟವಾಗುತ್ತದೆ ಮಾತ್ರವಲ್ಲದೇ ಸಣ್ಣಪ್ರಾಯದಲ್ಲೇ ಮಕ್ಕಳು ಲೈಂಗಿಕ ಆಕರ್ಷಣೆಗೆ ಒಳಗಾಗುತ್ತಿರುವುದರಿಂದ ಲೈಂಗಿಕ ಶಿಕ್ಷಣ ಕುರಿತಾದಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿರುವುದು ಇಂದಿನ ಜರೂರತ್ತಾಗಿದೆ.