Advertisement
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್ ವಿರುದ್ಧ ಸುಮಲತಾ ಅಂಬರೀಶ್ ಸ್ಪರ್ಧೆಯಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ, ಈಗ ಸೋಲು-ಗೆಲುವಿನ ಲೆಕ್ಕಾಚಾರದಿಂದಾಗಿ ಮತ್ತೂಮ್ಮೆ ಮುನ್ನಲೆಗೆ ಬಂದಿದೆ.
Related Articles
Advertisement
ಸುಮಲತಾ ಪರ: ಸಮೀಕ್ಷೆ ನಡೆಯುತ್ತಿರುವ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಮೇಲುಕೋಟೆ ಮತ್ತು ನಾಗಮಂಗಲದಲ್ಲಿ ಜೆಡಿಎಸ್ ಮುನ್ನಡೆ ಸಾಧಿÓಬಹುದೆಂಬ ಭರವಸೆ ಇದೆಯಾದರೂ, ಕೆ.ಆರ್.ಪೇಟೆ ಮತ್ತು ಕೆ.ಆರ್.ನಗರ ಕ್ಷೇತ್ರಗಳು ಸುಮಲತಾ ಪರ ನಿಲ್ಲಲಿವೆ ಎಂಬ ಅಭಿಪ್ರಾಯಗಳು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ.
ಈಗಾಗಲೇ ಸುಮಲತಾ ಅಂಬರೀಶ್ ಗೆಲುವಿನ ಭರವಸೆಯಲ್ಲಿದ್ದು, ಚುನಾವಣೆ ನಡೆದ ಮೂರು ದಿನದ ಬಳಿಕ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದಾರೆ. ಆನಂತರದಲ್ಲಿ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಕೂಡ ಜೆಡಿಎಸ್ ಜಿಲ್ಲಾಧ್ಯಕ್ಷರ ಮನೆಯಲ್ಲೇ ಸುದ್ಧಿಗೋಷ್ಠಿ ನಡೆಸಿ, ಗೆಲುವಿನ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಸಚಿವರ ನಿವೃತ್ತಿ ಘೋಷಣೆ ಚರ್ಚೆ: ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಒಂದು ವೇಳೆ ನಿಖೀಲ್ ಪರಾಭವಗೊಂಡರೆ ತಾವು ರಾಜಕೀಯವಾಗಿಯೇ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿರುವುದು ಕೂಡ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಮ್ಮ ಅಧಿಕಾರ ಬಲವನ್ನು ಸಮರ್ಥವಾಗಿ ಬಳಸಿ, ಪುತ್ರ ನಿಖೀಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇಬೇಕೆಂಬ ಉತ್ಕಟತೆಯನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಯ ನಂತರವೂ ಬೂತ್‌ವಾರು ವರದಿಯನ್ನು ಸಂಗ್ರಹಿಸುತ್ತಾ, ಗೆಲುವಿಗೆ ಪೂರಕವಾದ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.
ಹಿನ್ನಡೆ ಕ್ಷೇತ್ರಗಳ ಶಾಸಕರಿಗೆ ಮುಖ್ಯಮಂತ್ರಿ ತರಾಟೆ
ಜೆಡಿಎಸ್‌ನ ಆಂತರಿಕ ಸಮೀಕ್ಷೆಯಲ್ಲಿ ನಿಖೀಲ್ ಕುಮಾರಸ್ವಾಮಿಯವರಿಗೆ ಹಿನ್ನಡೆಯಾಗಿರುವ ಕ್ಷೇತ್ರದ ಶಾಸಕರಾದ ಡಾ.ಕೆ.ಆನ್ನದಾನಿ, ಎಂ.ಶ್ರೀನಿವಾಸ್ ಮತ್ತು ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸ್ಥಳೀಯವಾಗಿ ಕಾಂಗ್ರೆಸ್ ನಾಯಕರೊಡನೆ ಸಾಮರಸ್ಯ ಸಾಧಿಸುವಲ್ಲಿ ವಿಫಲರಾಗಿದ್ದೀರಿ ಎಂಬ ಆರೋಪವನ್ನು ಕೂಡ ಜೆಡಿಎಸ್ ಶಾಸಕರ ಮೇಲೆ ಹೊರಿಸಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆಯ ಆರಂಭಿಕ ಹಂತದಿಂದ ಕ್ಷೇತ್ರದ ಚುನಾವಣಾ ನಾಯಕತ್ವವನ್ನು ಆಯಾ ಶಾಸಕರಿಗೆ ನೀಡಲಾಗಿತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಜಿಲ್ಲೆಯಲ್ಲಿ ಠಿಕಾಣಿ ಹೂಡಿ ಚುನಾವಣಾ ಸಾರಥ್ಯವನ್ನು ವಹಿಸಿಕೊಂಡರು. ಅಲ್ಲದೆ, ಸ್ವಾಭಿಮಾನವನ್ನು ಬಿಟ್ಟು ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಹೋಗುವುದಿಲ್ಲವೆಂಬ ಖಡಕ್ ಸಂದೇಶ ವನ್ನು ರವಾನಿಸಿದ್ದರು.
ಚುನಾವಣೆಯ ಯಾವುದೇ ಸಂದರ್ಭದಲ್ಲೂ ಪರಾಜಿತ ಕಾಂಗ್ರೆಸ್ ಶಾಸಕರ ಮನೆ ಬಾಗಿಲಿಗೆ ಹೋಗುವ ಕನಿಷ್ಠ ಪ್ರಯತ್ನವನ್ನೂ ಮಾಡದ ಮುಖ್ಯಮಂತ್ರಿ ಕುಮಾರಸ್ವಾಮಿ, ಹಳೆಯ ಕಾಂಗ್ರೆಸ್ಸಿಗರೆಲ್ಲರೂ ನಮ್ಮ ಜತೆಯೇ ಇದ್ದಾರೆಂದು ಹೇಳಿಕೊಳ್ಳುವ ಮೂಲಕ ರೆಬಲ್ ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಡುವ ಪ್ರಯತ್ನ ನಡೆಸಿದ್ದರು. ಹೀಗೆ ಇಡೀ ಚುನಾವಣೆಯ ಉಸ್ತುವಾರಿಯನ್ನು ಸ್ವತಃ ಮುಖ್ಯಮಂತ್ರಿಯವರೇ ನಿರ್ವಹಿಸಿ, ಈಗ ಜೆಡಿಎಸ್ ಹಿನ್ನಡೆಗೆ ಶಾಸಕರನ್ನು ಗುರಿ ಮಾಡುತ್ತಿರುವುದು ಎಷ್ಟು ಸರಿ ಎಂಬುದು ಪ್ರಶ್ನೆಯಾಗಿದೆ.