ಹರಿಹರ: ನಗರಕ್ಕೆ ಅಗತ್ಯವಾದ ಕುಡಿಯುವ ನೀರು ಸಂಗ್ರಹಾಗಾರವಾಗಿ ಅಗಸನಕಟ್ಟೆ ಕೆರೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆರೆಯ ಸರ್ವೇ ಮಾಡುವ ಬಗ್ಗೆ ಹಾಗೂ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸುವ ಬಗ್ಗೆ ಆದಷ್ಟು ಶೀಘ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿರುತ್ತಾರೆ. ಆದ ಕಾರಣ ಶಾಶ್ವತವಾಗಿ ಕುಡಿಯುವ ನೀರು ನೀಡಲು ಅಗಸನಕಟ್ಟೆ ಕೆರೆಯನ್ನು ಸರ್ವೇ ಮಾಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ.
ಇದಲ್ಲದೆ ಇಡಿ ಜಿಲ್ಲೆಯ ಕುಡಿಯುವ ನೀರಿಗೆ ಅನುಕೂಲವಾಗುವಂತೆ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸುವ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದರು. ಈಗಾಗಲೇ ಎಪಿಎಂಸಿ ಪ್ರಾಂಗಣದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2000 ಎಂ.ಟಿ. ಸಾಮರ್ಥ್ಯದ ಗೋದಾಮು ನಿರ್ಮಾಣಕ್ಕೆ 1.3 ಕೋ.ರೂ., ಆರ್ .ಐ.ಡಿ.ಎಫ್ ಯೋಜನೆಯಡಿ ಮಲೇಬೆನ್ನೂರು ಗ್ರಾಮೀಣ ಸಂತೆ ಅಭಿವೃದ್ಧಿ ಕಾಮಗಾರಿಗೆ 1.42 ಕೋ.ರೂ., ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಮಿತಿ ಪ್ರಾಂಗಣದಲ್ಲಿ 5000 ಎಂ.ಟಿ. ಸಾಮರ್ಥ್ಯದ ಗೋದಾಮು ಕಾಮಗಾರಿಗೆ 2.37 ಕೋ.ರೂ. ನೀಡಲಾಗಿದೆ ಎಂದರು.
ಆರ್.ಐ.ಡಿ.ಎಫ್. ಯೋಜನೆಯಡಿ ಮಲೇಬೆನ್ನೂರು ಸಂತೆ ಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆಗೆ 3.32 ಕೋ., ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಾರುಕಟ್ಟೆ ಪ್ರಾಂಗಣದಲ್ಲಿ 1000 ಎಂ.ಟಿ. ಸಾಮರ್ಥ್ಯದ ಗೋದಾಮು ನಿರ್ಮಾಣಕ್ಕೆ 86 ಲಕ್ಷ ರೂ. ಕುರಿ-ಮೇಕೆ ಮಾರುಕಟ್ಟೆ ಅಭಿವೃದ್ಧಿಗೆ 48.8 ಲಕ್ಷ, ಆರ್ .ಐ.ಡಿ.ಎಫ್. ಯೋಜನೆಯಡಿ ಪ್ರಾಂಗಣದಲ್ಲಿ ಆಂತರಿಕ ರಸ್ತೆ ಅಭಿವೃದ್ಧಿಗೆ ಮತ್ತು ಮಲೇಬೆನ್ನೂರು ಮೂಲ ಸೌಕರ್ಯ ಅಭಿವೃದ್ಧಿಗೆ 2.3 ಕೋ. ಸೇರಿದಂತೆ ಒಟ್ಟು 12.6 ಕೋ.ರೂ. ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ದಾವಣಗೆರೆ ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿಲ್ಲಾ ಎಇಇ ಆರ್.ಚಂದ್ರಮೌಳಿ, ಎಪಿಎಂಸಿ ಅಧ್ಯಕ್ಷ ಮಹದೇವಪ್ಪ, ಜಿಪಂ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ತಾಪಂ ಮಾಜಿ ಸದಸ್ಯ ಎಚ್.ಎಚ್.ಬಸವರಾಜ್, ದಿಟ್ಟೂರು ಮಹೇಶ್ವರಪ್ಪ, ಸಿರಿಗೆರೆ ರಾಜಣ್ಣ, ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್, ಸಿ.ಎನ್.ಹುಲಿಗೇಶ್, ಹನುಮಂತ ರೆಡ್ಡಿ, ಎಚ್.ಕೆ. ಕೊಟ್ರಪ್ಪ, ರೇವಣಸಿದ್ದಪ್ಪ, ರಾಮಪ್ಪ ಮೇಗಳಗೆರೆ, ಎಲ್.ಬಿ. ಹನುಮಂತಪ್ಪ, ಕೃಷ್ಣಪ್ಪ ಜಾಡರ್ ಮತ್ತಿತರರಿದ್ದರು.