ನವದೆಹಲಿ: ಕಾಶಿ ವಿಶ್ವನಾಥ ಮಂದಿರದ ಸಮೀಪದ ಜ್ಞಾನವಾಪಿ ಶೃಂಗಾರ ಗೌರಿ ಸಂಕೀರ್ಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಕೋರ್ಟ್ ಆದೇಶ ನೀಡುವ ಮೂಲಕ ರಥಯಾತ್ರೆ ಸಂದರ್ಭದ ರಕ್ತಪಾತ ಮತ್ತು 1980-1990ರಂತೆ ಮುಸ್ಲಿಂ ವಿರೋಧಿ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಎಐಎಂಐಎಂ ವರಿಷ್ಠ ಅಸಾದುದ್ದೀನ್ ಒವೈಸಿ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:5 ಪೈಸೆ ಖರ್ಚು ಮಾಡದೇ,ಯಾರಿಗೂ ಒಂದು ಕಪ್ ಚಹ ಸಹಿತ ಕುಡಿಸದೇ ಸಿಎಂ ಆಗಿದ್ದೆ: ಸಿದ್ದರಾಮಯ್ಯ
ಕಾಶಿ ಮಂದಿರ ಸಮೀಪದ ವಿಡಿಯೋ ಸಮೀಕ್ಷೆಗೆ ವಾರಣಾಸಿ ಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿರುವ ಒವೈಸಿ, ಈ ಆದೇಶವನ್ನು ಧಾರ್ಮಿಕ ಸ್ಥಳಗಳ ಪೂಜಾ ಕಾಯ್ದೆ 1991ರ ಉಲ್ಲಂಘನೆಯಾಗಿದೆ ಎಂದು ಟ್ವೀಟ್ ನಲ್ಲಿ ಆಕ್ಷೇಪಿಸಿರುವುದಾಗಿ ವರದಿ ತಿಳಿಸಿದೆ.
ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪಿನಲ್ಲಿ, ಸಂವಿಧಾನದ ಮೂಲಭೂತ ಆಶಯದಲ್ಲಿ ಒಂದಾಗಿರುವ ಭಾರತೀಯ ರಾಜಕೀಯ ಜಾತ್ಯತೀತ ಲಕ್ಷಣಗಳನ್ನು ರಕ್ಷಿಸಲಿದೆ ಎಂದು ಹೇಳಿರುವುದಾಗಿ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಶುಕ್ರವಾರ ಕೋರ್ಟ್ ನೇಮಕ ಮಾಡಿರುವ ಸಮಿತಿ ಸದಸ್ಯರು ವಾರಣಾಸಿಯ ಕಾಶಿ ವಿಶ್ವನಾಥ ಮಂದಿರದ ಸಮೀಪ ಇರುವ ಜ್ಞಾನವಾಪಿ ಮಸೀದಿ ಪ್ರದೇಶಗಳ ಸಮೀಕ್ಷೆಯ ವಿಡಿಯೋ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಗುಂಪುಗಳು ಪರಸ್ಪರ ಪರ, ವಿರೋಧದ ಘೋಷಣೆಗಳನ್ನು ಕೂಗಿದ್ದ ಘಟನೆ ನಡೆದಿತ್ತು. ಈ ವೇಳೆ ಮಸೀದಿ ವ್ಯಾಪ್ತಿಯಲ್ಲಿ ಉದ್ನಿಗ್ನ ವಾತಾವರಣ ಉಂಟಾಗಿತ್ತು.
ಏನಿದು ಪ್ರಕರಣ?
ಜ್ಞಾನವಾಪಿ ಮಸೀದಿ ಆವರಣದಲ್ಲಿ ಶೃಂಗಾರ ಗೌರಿ, ಗಣೇಶ, ಹಾಗೂ ಆಂಜನೇಯ ಮತ್ತು ನಂದಿ ವಿಗ್ರಹಗಳಿದ್ದು, ಇವುಗಳ ಪೂಜೆಗೆ ಅವಕಾಶ ನೀಡಬೇಕೆಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮೀ ದೇವಿ, ಸೀತಾ ಸಾಹು ಹಾಗೂ ಇತರರು ವಾರಾಣಸಿ ಸ್ಥಳೀಯ ನ್ಯಾಯಾಲಯದಲ್ಲಿ 2021ರ ಏಪ್ರಿಲ್ 8ರಂದು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ವಾರಾಣಸಿ ಸಿವಿಲ್ (ಹಿರಿಯ ವಿಭಾಗ) ಜಡ್ಜ್ ರವಿ ಕುಮಾರ್ ದಿವಾಕರ್ ಅವರು, ಕಾಶಿ ವಿಶ್ವನಾಥ ದೇವಾಲಯದ ಸಮೀಪದ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇವಾಲಯ ಪ್ರದೇಶದ ವಿಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆಯನ್ನು ಈದ್ ನಂತರ ಹಾಗೂ ಮೇ 10ರೊಳಗೆ ನಡೆಸುವಂತೆ ಆದೇಶ ನೀಡಿತ್ತು.