ಬೆಂಗಳೂರು: ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಬೀದಿ ಹೋರಾಟಕ್ಕೆ ಇಳಿದಿದ್ದ ಕನ್ನಡಪರ ಹೋರಾಟಗಾರರು ಜೈಲಿಗೆ ಸೇರಿರುವ ಬೆನ್ನಲ್ಲೇ, ಪಾಲಿಕೆ ಇದೀಗ ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳ ಕನ್ನಡೀಕರಣಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.
ಕನ್ನಡಪರ ಹೋರಾಟಗಾರರ ಬಂಧನ ಸಂಬಂಧ ಈಗಾಗಲೇ ವಿವಿಧ ಕನ್ನಡ ಪರ ಸಂಘಟನೆಗಳು ಹೋರಾಟದ ಅಖಾಡಕ್ಕಿಳಿದಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು, ಜ.15ರ ಒಳಗೆ ಎಲ್ಲಾ ವಲಯದ ಉದ್ದಿಮೆಗಳು ಕನ್ನಡ ನಾಮಫಕ ಅಳವಡಿಕೆ ಮಾಡಿದ್ದಾರೆಯೇ? ಅಥವಾ ಇಲ್ಲವೆ ಎಂಬುವುದರ ಬಗ್ಗೆ ಸರ್ವೇ ನಡೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿ ಗುರುವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆಯನ್ನು ಬಳಸದೇ ಇರುವವರಿಗೆ ತಿಳಿವಳಿಕೆ ಪತ್ರ ನೀಡಿ ಕೂಡಲೇ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಿ: ನಗರದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕನ್ನಡ ಭಾಷೆಯನ್ನು ಬಳಸದ ಉದ್ದಿಮೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಮುಖ್ಯ ಆಯುಕ್ತರು ಸಭೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಸಂದೇಶ ರವಾನಿಸಿದರು.
ತಿಳಿವಳಿಕೆ ಪತ್ರ ಜಾರಿ ಮಾಡಿ: ಸಮೀಕ್ಷೆ ನಡೆಸುವಾಗ ನಾಮಫಲಕದಲ್ಲಿ ಕನ್ನಡ ಬಳಕೆ ಮಾಡದಿದ್ದಲ್ಲಿ ಆಯಾ ಉದ್ದಿಮೆಗಳಿಗೆ ತಿಳಿವಳಿಕೆ ಪತ್ರ ನೀಡಬೇಕು. ಉದ್ದಿಮೆ ಪರವಾನಗಿ ಇದ್ದರೆ ಯಾಕೇ ನಾವು ಉದ್ದಿಮೆ ಪರವಾನಗಿ ರದ್ದು ಮಾಡಬಾರದು ಎಂದು ನೀಡಬೇಕು. ಒಂದು ವೇಳೆ ಉದ್ದಿಮೆ ಪರವಾನಗಿ ಮಾಡಿಸದಿದ್ದರೆ ಏಕೆ ನಾವು ನಿಮ್ಮ ಉದ್ದಿಮೆಯನ್ನು ಮುಚ್ಚಬಾರದೆಂದು ತಿಳಿವಳಿಕೆ ಪತ್ರ ಜಾರಿಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಲಯ ಆಯುಕ್ತರಾದ ಇಬ್ರಾಹಿಂ ಮೈಗುರ್, ಪ್ರೀತಿ ಗೆಹೊÉàಟ್, ಎಲ್ಲಾ ವಲಯದ ಜಂಟಿ ಆಯುಕ್ತರು, ಉಪ ಆಯುಕ್ತರು(ಆಡಳಿತ), ಜಾಹೀರಾತು ವಿಭಾಗದ ಉಪ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿಗಳು, ಪಾಲಿಕೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.