Advertisement

ಬಿಡದಿಗೆ ಮಂಚನಬೆಲೆಯಿಂದ ನೀರು ಸರಬರಾಜಿಗಾಗಿ ಸರ್ವೆ

08:39 AM Jul 04, 2017 | |

ರಾಮನಗರ: ಬಿಡದಿ ಪಟ್ಟಣಕ್ಕೆ ಮಂಚನಬೆಲೆಯಿಂದ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿ ಸರ್ವೆಗೆ ಮಾಗಡಿ ಕ್ಷೇತ್ರದ ಶಾಸಕ ಎಚ್‌. ಸಿ.ಬಾಲಕೃಷ್ಣ ಮತ್ತು ಎಂಎಲ್‌ಸಿ ಸಿ.ಎಂ.ಲಿಂಗಪ್ಪಸೋಮವಾರ ಚಾಲನೆ ನೀಡಿದರು.

Advertisement

ಸರ್ವೆಗೆ ಸರ್ಕಾರ ಒಪ್ಪಿಗೆ : ಈ ವೇಳೆ ಮಾತನಾಡಿದ ಶಾಸಕ ಎಚ್‌. ಸಿ.ಬಾಲಕೃಷ್ಣ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಬಿಡದಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಪರಿಹಾರಕ್ಕಾಗಿ ಮಂಚನಬೆಲೆ ಜಲಾಶಯದಿಂದ ನೀರು ತರಲು ಉದ್ದೇಶಿಸಲಾಗಿದ್ದು, ಪ್ರಾಥಮಿಕ ಹಂತದ ಸರ್ವೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಸರ್ವೆ ಮುಗಿದ ನಂತರ ಯೋಜನೆಯ ವಿನ್ಯಾಸ ರೂಪಿಸಿ, ಯೋಜನಾ ವಿಸ್ತೃತ ವರದಿ ತಯಾರಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಯೋಜನೆಗೆ 158 ಕೋಟಿ ರೂ. ವೆಚ್ಚ ತಗುಲಬಹುದು ಎಂದು ಅಂದಾಜಿಸಿದರು.

ಭವಿಷ್ಯದ ದೃಷ್ಟಿ: ಬಿಡದಿ ಪಟ್ಟಣದಲ್ಲಿ ಸದ್ಯ ಸುಮಾರು 40 ಸಾವಿರ ಜನಸಂಖ್ಯೆ ಇದೆ. ಕುಡಿಯುವ ನೀರಿನ ಮೂಲವು
ಕೊಳವೆ ಬಾವಿಗಳಾಗಿವೆ. ಸದ್ಯ ಇಲ್ಲಿ ಸರಬರಾಜು ಆಗುತ್ತಿರುವ ನೀರಿನ ಪ್ರಮಾಣ ಸಾಕಾಗುತ್ತಿಲ್ಲ. ಬಿಡದಿಯಲ್ಲಿ 2048ರ ವೇಳೆಗೆ 1 ಲಕ್ಷ ಜನಸಂಖ್ಯೆ ಅಂದಾಜಿಸಲಾಗಿದೆ. ಪಟ್ಟಣದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಲ್ಲಿ ಮಂಚನಬೆಲೆಯಿಂದ ನೀರು ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಯೋಜನೆ: ಮಂಚನಬೆಲೆ ಮಾರ್ಗ ಮಧ್ಯದಲ್ಲಿ ಬರುವ ಚಿಕ್ಕನಹಳ್ಳಿ, ಬಸಮ್ಮನಹಳ್ಳಿ, ಕೆಂಪದ್ಯಾಪನಹಳ್ಳಿ, ಮಲ್ಲತ್ತಹಳ್ಳಿ,
ಬೆತ್ತಿಮಗೆರೆ, ರಾಯಣಗುಡಿಪಾಳ್ಯ, ಗಾಣಕಲ್ಲು, ಬೋರೆಹಳ್ಳಿ, ಕಾಕರಾಮನಹಳ್ಳಿ ಜೊತೆಗೆ ನೂತನವಾಗಿ ನಿರ್ಮಿಸಿರುವ
ಕೆಎಚ್‌ಬಿ ಕಾಲೋನಿ ಹಾಗೂ ಬಿಡದಿ ಪಟ್ಟಣವನ್ನು ಸೇರಿಸಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಪಟ್ಟಣಕ್ಕೆ ನೀರು: ಮಂಚನಬೆಲೆ ಜಲಾಶಯದಲ್ಲಿ ಜಾಕ್‌ವೆಲ್‌ ಹಾಗೂ ಪಂಪುಮನೆ ನಿರ್ಮಾಣ, ನೆಲ್ಲಿಗುಡ್ಡಕೆರೆ ಹತ್ತಿರ ಇರುವ ಎತ್ತರ ಪ್ರದೇಶದಲ್ಲಿ ಉದ್ದೇಶಿತ ಡಬುಟಿಪಿವರೆಗೆ ಎರುಕೊಳವೆ ಮಾರ್ಗ, ನೆಲ್ಲಿಗುಡ್ಡಕೆರೆ ಸಮೀಪ ಜಲಶುದ್ಧೀಕರಣ ಘಟಕ, ಬಿಡದಿ ಪಟ್ಟಣದಲ್ಲಿ ಮೇಲ್ಮಟ್ಟದ ಜಲಸಂಗ್ರಹಗಾರಗಳ ನಿರ್ಮಾಣ. ಜಲ ಸಂಗ್ರಹಗಾರಗಳಿಂದ ಪಟ್ಟಣಕ್ಕೆ ನೀರು ಸರಬರಾಜು ವಿತರಣಾ ಜಾಲ ಹಾಗೂ ಗೃಹ ಸಂಪರ್ಕ ಕಲ್ಪಿಸುವುದು ಯೋಜನೆ ಕಾಮಗಾರಿಗಳು ಎಂದು ಶಾಸಕರು ವಿವರಿಸಿದರು.

Advertisement

ಕುಡಿಯುವ ನೀರು ಸರಬರಾಜು ಯೋಜನೆ ಜೊತೆಗೆ ಪಟ್ಟಣದಲ್ಲಿ ಕೆಲವು ಕಡೆ ಮಾತ್ರ ಒಳಚರಂಡಿ ವ್ಯವಸ್ಥೆ
ಇರುವುದರಿಂದ ಸುಸಜ್ಜಿತ ಒಳಚರಂಡಿ ಯೋಜನೆಗೂ ಯೋಜನೆ ಸಿದ್ಧವಾಗಲಿದೆ. ಬಿಡದಿಯಲ್ಲಿ ಸೌಕರ್ಯ ಕಲ್ಪಿಸಲು
ಸಿಎಂ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದರು.  ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮ, ಮುಖ್ಯಾಧಿಕಾರಿ
ಶಿವಕುಮಾರ್‌, ಮುಖಂಡರಾದ ರಾಮಕೃಷ್ಣಯ್ಯ, ಸಿ.ಎಚ್‌ .ಪುಟ್ಟಯ್ಯ, ದ್ಯಾವಲಿಂಗಯ್ಯಪಾಳ್ಯದ ಯು.ನರಸಿಂಹಯ್ಯ,
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇ ಸುರೇಶ್‌, ಜೆಇ ನೇಗಿನಾಳ್‌, ನೆಜ್‌ ಇನ್ಫೋಟೆಕ್‌ ಯೋಗೇಶ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next