Advertisement

ದೊಡ್ಡ ಕಟ್ಟಡಗಳ ಅಳತೆ ಪತ್ತೆಗೆ ಸರ್ವೆ

12:22 PM May 20, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮಾಲ್‌ಗ‌ಳು, ಟೆಕ್‌ಪಾರ್ಕ್‌ ಹಾಗೂ ಬೃಹತ್‌ವಾಣಿಜ್ಯ ಕಟ್ಟಡಗಳ ಸುತ್ತಳತೆಯನ್ನು ಪತ್ತೆ ಹಚ್ಚಲು ಮುಂದಿನ ವಾರದಿಂದ ಟೋಟಲ್‌ ಸ್ಟೇಷನ್‌ ಸಮೀಕ್ಷೆ ಆರಂಭಿಸಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ತಿಳಿಸಿದ್ದಾರೆ. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೋಟಲ್‌ ಸ್ಟೇಷನ್‌ ಸರ್ವೆ ನಡೆಸುವ ಜವಾಬ್ದಾರಿಯನ್ನು ಆಯಾ ವಲಯದಲ್ಲಿ ಪ್ರತ್ಯೇಕ ಏಜೆನ್ಸಿಗಳಿಗೆ ವಹಿಸಲಾಗಿದೆ. ಮೊದಲ ಹಂತದಲ್ಲಿ ದಕ್ಷಿಣ, ಪಶ್ಚಿಮ, ಬೊಮ್ಮನಹಳ್ಳಿ ಹಾಗೂ ಯಲಹಂಕ ವಲಯಗಳಲ್ಲಿನ ಮಾಲ್‌, ಟೆಕ್‌ಪಾರ್ಕ್‌ ಮತ್ತು ಬೃಹತ್‌ ಕಟ್ಟಡಗಳ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

ಎರಡನೇ ಹಂತದಲ್ಲಿ ಮಹದೇವಪುರ, ಪೂರ್ವ, ದಾಸರಹಳ್ಳಿ ಹಾಗೂ ರಾಜರಾಜೇ ಶ್ವರಿ ನಗರ ವಲಯಗಳಲ್ಲಿ ಸರ್ವೆ ನಡೆಸಲಾ ಗುವುದು. ಆಯಾ ವಲಯದ ಜಂಟಿ ಆಯುಕ್ತರ ನೇತೃತ್ವದಲ್ಲಿ ಆಯಾ ವಲಯದ ಸಹಾಯಕ ಕಂದಾಯ ಅಧಿಕಾರಿಗಳ ಸಹಯೋಗದಲ್ಲಿ ಸಮೀಕ್ಷೆ ನಡೆಯಲಿದ್ದು, ಪಾಲಿಕೆಗೆ ತಪ್ಪು ಮಾಹಿತಿ ನೀಡಿರುವ ಕಟ್ಟಡಗಳ ವಿರುದ್ಧ ಯಾವುದೇ ಒತ್ತಡಕ್ಕೆ ಒಳಗಾಗದೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ನಗರದಲ್ಲಿ 71 ಮಾಲ್‌ಗ‌ಳು, 77 ಟೆಕ್‌ಪಾರ್ಕ್‌ಗಳು ಹಾಗೂ ನೂರಾರು ಬೃಹತ್‌ ವಾಣಿಜ್ಯ ಕಟ್ಟಡಗಳಿದ್ದು, ಸ್ವಯಂ ಘೋಷಿತ ಆಸ್ತಿ ಪದ್ಧತಿಯಡಿಯಲ್ಲಿ ಪಾಲಿಕೆಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಅದರ ಹಿನ್ನೆಲೆಯಲ್ಲಿ ಈ ಹಿಂದೆ ಕೆಲವೊಂದು ಕಟ್ಟಡಗಳನ್ನು ಸರ್ವೆ ನಡೆಸಿದಾಗ ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ. ಹೀಗಾಗಿ ನಗರದಲ್ಲಿನ ಎಲ್ಲ ಬೃಹತ್‌ ಕಟ್ಟಡಗಳ ಸರ್ವೆಗೆ ಮುಂದಾಗಿದ್ದು, ಸರ್ವೆ ನಡೆಸಲು ಏಜೆನ್ಸಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 

1000 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ!: ಕಳೆದ ಸಾಲಿನಲ್ಲಿ ಇದೇ ಅವಧಿಗೆ 459 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಈವರೆಗೆ 675 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಜತೆಗೆ ಸಾವಿರಾರು ಆಸ್ತಿದಾರರು ಬಿಲ್‌ ಪಾವತಿಸಲು ಚಲನ್‌ ಪಡೆದುಕೊಂಡಿದ್ದು, ಮೂರು ದಿನಗಳೊಳಗೆ 198 ಕೋಟಿ ರೂ. ತೆರಿಗೆ ಸಂಗ್ರಹವಾಗಲಿದೆ. ಇದರೊಂದಿಗೆ ಮೇ 31ರವರೆಗೆ ಶೇ.5ರಷ್ಟು ರಿಯಾಯಿತಿ ನೀಡಿರುವುದರಿಂದಾಗಿ ಒಟ್ಟು 1000 ಸಾವಿರ ಕೋಟಿ ರೂ. ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Advertisement

ನಗದು ಮೂಲಕ ತೆರಿಗೆ ಪಾವತಿಸಿ
ನಗರದ ಆಸ್ತಿ ಮಾಲೀಕರು ಸುಲಭವಾಗಿ ತೆರಿಗೆ ಪಾವತಿ ಮಾಡಲು ಕೆನರಾ ಬ್ಯಾಂಕ್‌ ಪಾಲಿಕೆಯ ಜಯನಗರ, ಆರ್‌.ಆರ್‌.ನಗರ, ಬೆಮೆಲ್‌ ಬಡಾವಣೆ 3ನೇ ಹಂತ, ದಾಸರ ಹಳ್ಳಿ, ಕಾಕ್ಸ್‌ಟೌನ್‌, ಹೂಡಿ, ಮಾರತ್ತಹಳ್ಳಿ, ಗಾಳಿ ಆಂಜನೇಯ ಸ್ವಾಮಿ ದೇವಾಲಯ ವಾರ್ಡ್‌, ಸಿ.ವಿ.ರಾಮನ್‌ನಗರ, ಬೊಮ್ಮನಹಳ್ಳಿಯ ಸಹಾಯಕ ಕಂದಾಯಾಧಿಕಾರಿಗಳ ಕಚೇರಿಯಲ್ಲಿ ತಾತ್ಕಾಲಿಕವಾಗಿ ಕೌಂಟರ್‌ಗಳನ್ನು ಆರಂಭಿದೆ. ಈ ಕೌಂಟರ್‌ಗಳಲ್ಲಿ 25 ಸಾವಿರ ರೂ. ವರೆಗೆ ನಗದು ರೂಪದಲ್ಲಿ ಆಸ್ತಿ ತೆರಿಗೆ ಪಾವತಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next